ಮಡಿಕೇರಿ, ಅ. ೨೯: ಕಳೆದ ಹಲವು ದಿನಗಳಿಂದ ಸಂಪಾಜೆ ಗ್ರಾಮದ ಕಡೆಪಾಲ, ಪೆರಂಗೊಡಿ, ಬೈಲೆ, ಗೂನಡ್ಕ, ದರ್ಖಾಸ್, ಪೇರಡ್ಕ ಪ್ರದೇಶದಲ್ಲಿ ಒಂಟಿ ಸಲಗವು ತೋಟಗಳಿಗೆ ನುಗ್ಗಿ ರೈತರ ಕೃಷಿಗಳನ್ನು ನಾಶಪಡಿಸುತ್ತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಈ ಪ್ರದೇಶದ ಜನರು, ವಿದ್ಯಾರ್ಥಿಗಳು ಭಯಬೀತರಾಗಿ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಸಂಬAಧಪಟ್ಟ ಅರಣ್ಯಾಧಿಕಾರಿಗಳು ಕೂಡಲೇ ಅರವಳಿಕೆ ಚುಚ್ಚುಮದ್ದು ಹಾಯಿಸಿ ಆನೆಯನ್ನು ಹಿಡಿದು ವನ್ಯ ಪ್ರದೇಶಕ್ಕೆ ವರ್ಗಾಯಿಸಬೇಕಾಗಿ ಕಾಂಗ್ರೆಸ್ ಮುಖಂಡ ಟಿ.ಎಂ. ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಜ್ಯ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಮತ್ತು ಅರಣ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ದೂರವಾಣಿ ಕರೆಯ ಮೂಲಕ ಮನವಿ ಮಾಡಿದ್ದಾರೆ.