ಕೂಡಿಗೆ, ಅ. ೨೮: ಲೋಕೋಪಯೋಗಿ ಇಲಾಖೆ ವತಿಯಿಂದ ಮುಳ್ಳುಸೋಗೆಯಿಂದ ಕೂಡಿಗೆಗೆ ತೆರಳುವ ರಸ್ತೆಯ ಅಗಲೀಕರಣ ಮತ್ತು ಅಪಘಾತ ವಲಯದ ಜಾಗಗಳಲ್ಲಿ ರಸ್ತೆ ವಿಭಜಕ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ಅಭಿವೃದ್ಧಿ ಮತ್ತು ರಾಜ್ಯ ಹೆದ್ದಾರಿ ಅಗಲೀಕರಣ ಜೊತೆಗೆ ಅಪಘಾತ ಸ್ಥಳ ಎಂದು ಗುರುತಿಸಲ್ಪಡುವ ಸ್ಥಳಗಳಲ್ಲಿ ರಸ್ತೆ ವಿಭಜಕ (ಡಿವೈಡರ್) ಅಳವಡಿಕೆ ಮತ್ತು ರಸ್ತೆಯ ಅಗಲೀಕರಣ ಮಾಡುವ ಮೂಲಕ ವಾಹನಗಳ ಚಾಲನೆ ಸುಗಮವಾಗಲು ಮತ್ತು ಅಪಘಾತಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ರಂಜನ್ ತಿಳಿಸಿದರು.
ಭೂಮಿಪೂಜೆ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ ಸೇರಿದಂತೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೀಟರ್, ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.