ಮಡಿಕೇರಿ, ಅ. ೨೭: ಮಡಿಕೇರಿ ನಗರದ ಜನತೆಗೆ ಇದೊಂದು ಬೇಸರ ಮೂಡಿಸುವ ಘಟನೆ. ನಗರದ ಪತ್ರಿಕಾಭವನದ ಎದುರಿನ ಮನೆಯ ಗೇಟ್‌ನಲ್ಲಿ ಎರಡು ಕೈಯಿರಿಸಿ ಬಹುತೇಕ ದಿನಂಪ್ರತಿ ರಸ್ತೆಯುದ್ದಕ್ಕೂ ಕಣ್ಣಾಡಿಸುತ್ತಾ ಪತಿಯ ಬರುವಿಕೆಯನ್ನು ಎದುರು ನೋಡುತ್ತಿದ್ದ ಕಿಟ್ಟಿ ಆಂಟಿ ಇನ್ನಿಲ್ಲ... ೨೦೧೮ರಲ್ಲಿ ನಿಗೂಡ ರೀತಿಯಲ್ಲಿ ನಾಪತ್ತೆಯಾಗಿದ್ದ ನಿವೃತ್ತ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಕೀಪಾಡಂಡ ನಂಜುAಡ ಅವರು ಏನಾದರೆಂಬದು ಈತನಕವೂ ರಹಸ್ಯವಾಗಿಯೇ ಉಳಿದು ಹೋಗಿದೆ. ಚೇರಂಬಾಣೆಯ ಪಾಕ ದೇವಸ್ಥಾನದ ಉತ್ಸವಕ್ಕೆಂದು ಪತ್ನಿಗೆ ಕೈಬೀಸಿ ತೆರಳಿದ ನಂಜುAಡ ಅವರು ೨೦೧೮ರ ಡಿಸೆಂಬರ್ ೧೬ ರಿಂದ ನಾಪತ್ತೆಯಾಗಿದ್ದು, ಪೊಲೀಸ್ ದೂರು ದಾಖಲಾಗಿತ್ತು. ತನಿಖೆ ನಡೆಯುತ್ತಿದ್ದರೂ ಈ ಪ್ರಕರಣಕ್ಕೆ ಅಂತಿಮ ತಿರುವು ದೊರೆತಿಲ್ಲ. ಕೆಲ ಸಮಯದ ಹಿಂದೆ ಅಲ್ಲಿನ ಅರಣ್ಯವೊಂದರಲ್ಲಿ ಇವರಿಗೆ ಸೇರಿದ ಕೆಲ ವಸ್ತುಗಳು ಪತ್ತೆಯಾಗಿದೆ ಎಂದು ಹೇಳಲಾದರೂ, ಇದು ಕೂಡ ಸಂಶಯಾಸ್ಪದವಾಗಿಯೇ ಉಳಿದಿದೆ.

ಇವರ ಪತ್ನಿ ಜಾನಕಿ (ಕಿಟ್ಟಿ-೮೫) ಅವರು ಇಳಿ ವಯಸ್ಸಿನಲ್ಲಿ ಪ್ರತಿದಿನ ಮನೆಯಲ್ಲಿ ಏಕಾಂಗಿಯಾಗಿ ಪತಿಯ ಬರುವಿಕೆಗಾಗಿ

ಎದುರು ನೋಡುತ್ತಿದ್ದ ದೃಶ್ಯ ಹಲವರ ಮನಕಲಕುತಿತ್ತು. ಇದೀಗ ಅಕ್ಟೋಬರ್ ೨೧ರಂದು ಜಾನಕಿ ಅವರು ಈ ನೋವಿನ ನಡುವೆಯೇ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವು ವಯೋ ಸಹಜವೇ

ಆದರೂ ಕಳೆದ ಮೂರು ವರ್ಷಗಳಿಂದ ದುಃಖದ ಭಾರದಲ್ಲಿ ಪತಿ ಇಂದು ಬರಬಹುದು.. ನಾಳೆ ಬರಬಹುದು.. ಎಂಬ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ ಅವರು ಕಾಯುತ್ತಿದ್ದುದು ಮಾತ್ರ ಹಲವರ ಕಣ್ಣಲ್ಲಿ ನೀರಾಡಿಸಿದೆ.