ಮಡಿಕೇರಿ, ಅ. ೨೭: ನಗರದ ಹೊರವಲಯದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಿನ್ನೆ ದಿನ ೨೧ ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದ ಬೆನ್ನಲ್ಲೆ ಇಂದು ಮತ್ತೆ ೧೨ ಮಂದಿ ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ನಿನ್ನೆ ದಿನ ಪರೀಕ್ಷೆಗೆ ಒಳಗಾಗಿದ್ದ ಸುಮಾರು ೧೪೦ ಮಕ್ಕಳ ಪೈಕಿ ೧೦ ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿದ್ದ ಇಬ್ಬರು ವಿದ್ಯಾರ್ಥಿಗಳಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ ೩೩ಕ್ಕೆ ಏರಿಕೆಯಾಗಿದೆ. ಅಲ್ಲಿನ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗೂ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜವಾಹರ್ ನವೋದಯ ವಿದ್ಯಾಲಯವನ್ನು ಕಂಟೈನ್‌ಮೆAಟ್ ವಲಯವನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.

ಸೆ. ೨೦ ರಿಂದ ಶಾಲೆ ಆರಂಭವಾಗಿದ್ದು, ಐದು ದಿನದಲ್ಲೇ ಹತ್ತನೇ ತರಗತಿಯ ಇಬ್ಬರು ಮಕ್ಕಳಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಿಬ್ಬರಿಗೂ ಕೊರೊನಾ ದೃಢಪಟ್ಟಿತ್ತು. ಅದಾದ ಬಳಿಕ ೧೦ನೇ ತರಗತಿಯ ಎಲ್ಲ ಮಕ್ಕಳನ್ನು ಪರೀಕ್ಷೆಗೊಳಪಡಿಸಿ ಪತ್ಯೇಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಎಲ್ಲರದ್ದು ನೆಗೆಟಿವ್ ವರದಿ ಬಂದ ಬಳಿಕ ಅವರಿಗೆ ಪುನಹ ತರಗತಿಗಳನ್ನು ಆರಂಭಿಸಲಾಗಿತ್ತು. ಇದಾದ ನಂತರ ಮೊನ್ನೆ ದಿನ ಇಬ್ಬರಿಗೆ ಸೋಂಕು ಕಂಡು ಬಂದ ಕಾರಣ ಜಿಲ್ಲಾಡಳಿತ ಎಲ್ಲರನ್ನು ಪರೀಕ್ಷೆಗೊಳಪಡಿಸಲು ವ್ಯವಸ್ಥೆ ಮಾಡಿತು. ಇದೀಗ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಬಂದು ದಾಖಲಾಗಿರುವ ೯ ರಿಂದ ೧೨ನೇ ತರಗತಿಯವರಾಗಿದ್ದು, ಹೆಚ್ಚಿನವರಿಗೆ ರೋಗ ಲಕ್ಷಣಗಳಿಲ್ಲ. ಕೋವಿಡ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ತಿಳಿಸಿದ್ದಾರೆ.