ಕುಶಾಲನಗರ, ಅ.೨೭: ಕುಶಾಲನಗರ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ವ್ಯಾಪ್ತಿಯ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರ ಸಭೆ ನಡೆಸಲಾಯಿತು.

ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ದೇವಾಲಯಗಳ ಸರಣಿ ಕಳ್ಳತನ ಹಿನ್ನೆಲೆಯಲ್ಲಿ ಕಳ್ಳತನ ತಡೆಗಟ್ಟುವ ಸಂಬAಧ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮಾದೇಶ್ ಅವರು ಹಲವು ಸೂಚನೆಗಳನ್ನು ಸಲಹೆಗಳನ್ನು ನೀಡಿದರು.

ದೇವಾಲಯಗಳ ಹುಂಡಿಯಲ್ಲಿ ಸಂಗ್ರಹವಾಗುವ ಕಾಣಿಕೆ ಹಣವನ್ನು ಆಗಾಗ್ಗೆ ತೆಗೆಯುವ ಕ್ರಮ ಕೈಗೊಳ್ಳುವುದು, ದೇವಾಲಯದಲ್ಲಿ ರಾತ್ರಿ ಪಾಳಿ ವಾಚ್ ಮನ್ ನಿಯೋಜಿಸುವುದು, ಈ ರೀತಿ ಮಾಡಿದಲ್ಲಿ ಕಳ್ಳತನಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ ಯಾವುದೇ ಕೃತ್ಯಗಳು ನಡೆಯದಂತೆ ಕ್ರಮಕೈಗೊಳ್ಳಲು ಸುಲಭವಾಗುತ್ತದೆ ಎಂದರು. ಪಟ್ಟಣದಲ್ಲಿ ರಾತ್ರಿ ಪಾಳಿ ಹೆಚ್ಚಿಸುವಂತೆ ದೇವಾಲಯ ಪ್ರತಿನಿಧಿಗಳು ಮನವಿ ಮಾಡಿದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಸುತ್ತಮುತ್ತ ದೇವಾಲಯಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.