? ಕುಡೆಕಲ್ ಸಂತೋಷ್

ಮಡಿಕೇರಿ, ಅ. ೨೬ : ಜಿಲ್ಲೆಯ ಹಾರಂಗಿ ಅಣೆಕಟ್ಟೆ ನಿರ್ಮಾಣ ಸಂದರ್ಭ ಮುಳುಗಡೆಯಾದ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯ ಜಾಗ ಹಸ್ತಾಂತರ ಮಾಡುವ ಸಂಬAಧ ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಅರಣ್ಯ ಇಲಾಖೆ ವತಿಯಿಂದ ಈ ಸಂಬAಧ ತಂಡವನ್ನು ರಚನೆ ಮಾಡಲಾಗಿದ್ದು, ಒಟ್ಟು ೪೭ ಗ್ರಾಮಗಳಲ್ಲಿ ಸರ್ವೆ ಮಾಡಿ ಸಿ ಅಂಡ್ ಡಿ ಜಾಗ ಗುರುತು ಮಾಡಲಾಗುತ್ತಿದೆ.

ಸೋಮವಾರಪೇಟೆ ತಾಲೂಕಿನ ಹುದುಗೂರು ಗ್ರಾಮದಲ್ಲಿ ಹರಿಯುತ್ತಿರುವ ಹಾರಂಗಿ ನದಿಗೆ ಅಡ್ಡಲಾಗಿ ಹಾರಂಗಿ ಜಲಾಶಯ ನಿರ್ಮಾಣ ಮಾಡುವ ಸಂದರ್ಭ ಸುತ್ತಮುತ್ತಲಿನಲ್ಲಿ ನೆಲೆಸಿದ್ದ ನಿವಾಸಿಗಳ ಮನೆ ಹಾಗೂ ಜಾಗ ಮುಳುಗಡೆ ಗೊಂಡಿದ್ದವು. ಇದಕ್ಕೆ ಪರ್ಯಾಯವಾಗಿ ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ೯೦೦ಎಕರೆ ಹಾಗೂ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ೩೦೦೦ಎಕರೆ ಜಾಗವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿ ನೀಡಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯಿಂದ ೧೮೦೦೦ಎಕರೆ ಜಾಗ ಹಸ್ತಾಂತರ ಮಾಡುವಂತೆ ಸರಕಾರ ಸೂಚಿಸಿತ್ತು. ಆದರೆ ಜಾಗ ಹಸ್ತಾಂತರ ಮಾಡಿಲ್ಲವೆಂದು ಕೆಲವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ೧೧೭೨೨.೨೯ ಹೆಕ್ಟೇರ್ ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸು ವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖಾ ವ್ಯಾಪ್ತಿಯಲ್ಲಿರುವ ಸಿ ಮತ್ತು ಡಿ ಜಾಗವನ್ನು ಸರ್ವೆ ಮೂಲಕ ಗುರುತಿಸುವ ಕಾರ್ಯವಾಗುತ್ತಿದೆ.

೧೮೦೦೦ ಎಕರೆ ಜಾಗ ನೀಡಲು ನಿರ್ದೇಶನ

೧೯೭೦ರಲ್ಲಿ ಹಾರಂಗಿ ಜಲಾಶಯ ನಿರ್ಮಾಣ ಕಾರ್ಯ ಆರಂಭಗೊAಡಿದ್ದು, ಈ ಸಂದರ್ಭದಲ್ಲಿ ಸುತ್ತಮುತ್ತಲಿನಲ್ಲಿ ನೆಲೆಸಿದ್ದವರ ಮನೆ ಹಾಗೂ ಜಾಗ ಮುಳುಗಡೆಗೊಂಡಾಗ ಒಟ್ಟು ೩೯೦೦ ಎಕರೆ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಗೆ ಪುನರ್ವಸತಿಗಾಗಿ ಹಸ್ತಾಂತರಿಸಲಾಗಿತ್ತು. ನಂತರದಲ್ಲಿ ೧೨.೫.೧೯೭೨ರಲ್ಲಿ ೧೮೦೦೦ ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸು ವಂತೆ ಸರಕಾರ ಕಂದಾಯ ಇಲಾಖೆಗೆ ನಿರ್ದೇಶಿಸಿತ್ತು. ಆದರೆ, ಅಷ್ಟೊಂದು ಜಾಗ ಲಭ್ಯವಿಲ್ಲದ ಕಾರಣ ಹಸ್ತಾಂತರ ಆಗಿರಲಿಲ್ಲ.

ನ್ಯಾಯಾಲಯದಲ್ಲಿ ಅರ್ಜಿ : ಈ ಪ್ರಕರಣಕ್ಕೆ ಸಂಬAಧಿಸಿದAತೆ ಕಾವೇರಿ ಸೇನೆಯ ಸಂಚಾಲಕ ರವಿಚಂಗಪ್ಪ ಹಾಗೂ ಬಿಟ್ಟಂಗಾಲದ ಸಿ.ಸಿ. ದೇವಯ್ಯ ಅವರುಗಳು ೨೦೨೦ರಲ್ಲಿ ವಕೀಲ ಕೆ.ಎಸ್.ಭೀಮಯ್ಯ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಆರು ಮಂದಿಯನ್ನು ಪ್ರತಿವಾದಿಗಳನ್ನಾಗಿ ಸಲಾಗಿತ್ತು. ಅರ್ಜಿಯಲ್ಲಿ ನಾಲ್ಕು ದಶಕಗಳು ಕಳೆದರೂ ಹಾರಂಗಿ ಪುನರ್ವಸತಿ ಜಾಗಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಪರ್ಯಾಯ ಜಾಗ ಹಸ್ತಾಂತರ ಮಾಡಿಲ್ಲ, ಜಿಲ್ಲೆಯಲ್ಲಿ ೧೧,೭೨೨.೨೯ ಹೆಕ್ಟೇರ್ ಸಿ ಮತ್ತು ಡಿ ಜಾಗವಿದ್ದು, ೧೯೯೪ರ ಆದೇಶದಂತೆ ಆ ಜಾಗವನ್ನು ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಈ ಸಂಬAಧ ವಿಚಾರಣೆ ಕೈಗೆತ್ತಿಕೊಂಡ

(ಮೊದಲ ಪುಟದಿಂದ) ನ್ಯಾಯಾಧೀಶರುಗಳಾದ ಬಿ.ವಿ.ನಾಗರತ್ನ ಹಾಗೂ ಕೆ.ಎಂ.ಖಾಝಿ ಅವರುಗಳಿದ್ದ ಪೀಠ ಕಂದಾಯ ಇಲಾಖೆ ಮೂಲಕ ೧೧,೭೨೨.೨೯ ಹೆಕ್ಟೇರ್ ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ತಾ. ೮.೪.೨೦೨೧ರಂದು ನೀಡಿದ ತೀರ್ಪಿನಲ್ಲಿ ಸರಕಾರಕ್ಕೆ ಸೂಚನೆ ನೀಡಿತ್ತು. ಸರಕಾರದ ಪರ ಸರಕಾರಿ ಹೆಚ್ಚುವರಿ ವಕೀಲೆ ಹೆಚ್. ವಾಣಿ ವಕಾಲತ್ತು ವಹಿಸಿದ್ದರು.

ಸರ್ವೆಗೆ ಸೂಚನೆ

ನ್ಯಾಯಾಲಯದ ಆದೇಶದ ಮೇರೆಗೆ ಸರಕಾರದ ಸೂಚನೆಯಂತೆ ಹಿಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ತಾ. ೨೭.೯.೨೦೨೧ ರಂದು ನಡೆದ ಸಭೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ, ಕಂದಾಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆದು ಸಿ ಮತ್ತು ಡಿ ಜಾಗದ ಜಂಟಿ ಸರ್ವೆ ಕಾರ್ಯ ನಡೆಸಿ ಜಾಗ ಗುರುತಿಸಿ, ನಕಾಶೆ ತಯಾರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಗಳು ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅರಣ್ಯ ತಂಡ ರಚನೆ

ಜಿಲ್ಲಾಧಿಕಾರಿಗಳ ಸಭೆಯಲ್ಲಿ ತೀರ್ಮಾನವಾಗಿರುವಂತೆ ಸಿ ಮತ್ತು ಡಿ ವರ್ಗದ ಇಲಾಖಾ ವಶದಲ್ಲಿರುವ ಮತ್ತು ಒತ್ತುವರಿಯಾಗಿರುವ ಪ್ರದೇಶವನ್ನು ಗುರುತಿಸಲು ಅರಣ್ಯ ಇಲಾಖೆ ವತಿಯಿಂದ ತಂಡ ವೊಂದನ್ನು ರಚಿಸಲಾಗಿದೆ. ತಾ.೨೮.೯.೨೦೨೧ ರಂದೇ ತಂಡ ರಚನೆ ಮಾಡಲಾಗಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಗಳು ಹಾಗೂ ಉಪ ವಲಯ ಅರಣ್ಯಾಧಿಕಾರಿ ಗಳನ್ನೊಳಗೊಂಡ ತಂಡ ರಚಿಸಲಾಗಿದೆ. ತಂಡದಲ್ಲಿ ೭ ಮಂದಿ ವಲಯ ಅರಣ್ಯಾಧಿಕಾರಿಗಳು ಹಾಗೂ ೩೦ ಮಂದಿ ಉಪ ವಲಯ ಅರಣ್ಯಾಧಿಕಾರಿಗಳು ಈಗಾಗಲೇ ಸರ್ವೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಗಡುವು ಮುಕ್ತಾಯ

ಸರ್ವೆ ಕಾರ್ಯ ಕೈಗೊಳ್ಳಲು ಕ್ಷೇತ್ರ ಮಟ್ಟದಲ್ಲಿ ರಚಿಸಲಾಗಿರುವ ತಂಡದಲ್ಲಿನ ಸದಸ್ಯರುಗಳಿಗೆ ಕೆಲವೊಂದು ಗ್ರಾಮಗಳನ್ನು ವಿಂಗಡಿಸಿ ನೀಡಲಾಗಿದ್ದು, ಸಂಬAಧಿಸಿದ ಗ್ರಾಮಗಳಲ್ಲಿನ ಸಿ ಮತ್ತು ಡಿ ಜಮೀನಿನ ಸರ್ವೆ ಮುಗಿಸಿ ೧೫ ದಿನಗಳಲ್ಲಿ ಮುಕ್ತಾಯಗೊಳಿಸಿ ನಕ್ಷೆಯೊಂದಿಗೆ ವರದಿ ಸಲ್ಲಿಸಲು ತಾ. ೧೫.೧೦.೨೦೨೧ರ ಗಡುವು ನೀಡಲಾಗಿತ್ತು. ಆದರೆ, ಸರಣಿ ಸರಕಾರಿ ರಜೆಗಳು ಹಾಗೂ ಹಬ್ಬಾಚರಣೆಗಳು ಇದ್ದುದರಿಂದ ವಿಳಂಬವಾಗಿದ್ದು, ಸರ್ವೆ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಲು ಮೇಲಧಿಕಾರಿಗಳಿಂದ ಸೂಚನೆ ಬಂದಿರುವದಾಗಿ ತಿಳಿದು ಬಂದಿದೆ.

ಖಾಲಿ ಜಾಗದ ಸರ್ವೆ

ಜಿಲ್ಲಾಡಳಿತದಿಂದ ಗುರುತಿಸಿ ನೀಡಲಾಗಿರುವ ಗ್ರಾಮಗಳಲ್ಲಿರುವ ಸರ್ವೆ ನಂಬರ್‌ಗಳಲ್ಲಿರುವ ಜಾಗಗಳನ್ನು ಸರ್ವೆ ಮಾಡಲಾಗುತ್ತಿದೆ. ಗುರುತಿಸಲಾಗಿರುವ ಜಾಗಗಳಲ್ಲಿ ಬಹುತೇಕ ಜನವಸತಿ, ಕೃಷಿ ಕಾರ್ಯ ಕೈಗೊಳ್ಳಲಾಗಿದ್ದು, ಸದ್ಯದ ಮಟ್ಟಿಗೆ ಖಾಲಿ ಇರುವ ಜಾಗಗಳನ್ನು ಮಾತ್ರ ಸರ್ವೆ ಮಾಡಲಾಗುತ್ತಿದೆ. ಅತಿಕ್ರಮಣಗೊಂಡಿರುವ ಜಾಗಗಳನ್ನು ಕಂದಾಯ ಇಲಾಖೆ ಬೇರ್ಪಡಿಸಿ ಕೊಡಬೇಕಾಗಿದೆ, ಈ ನಿಟ್ಟಿನಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿರುವದಾಗಿ ತಿಳಿದುಬಂದಿದೆ.

ಕAದಾಯ ಇಲಾಖೆಯಿಂದಲೂ ಮಾಹಿತಿ

ಇತ್ತ ಕಂದಾಯ ಇಲಾಖೆ ವತಿಯಿಂದಲೂ ಒತ್ತುವರಿಯಾಗಿರುವ ಹಾಗೂ ಖಾಲಿ ಇರುವ ಜಾಗದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಂದಾಯ ಗ್ರಾಮಗಳಲ್ಲಿನ ಸರಕಾರಿ ಜಾಗವಿರುವ ಬಗ್ಗೆ ಸರ್ವೆ ಮಾಡಲಾಗುತ್ತದೆ. ಇದರಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಜನರಿಂದ ಆಕ್ಷೇಪಣೆಗಳು ಬಂದಲ್ಲಿ ಮುಂದೆ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆಯೂ ಅಧಿಕಾರಿ ವರ್ಗದಲ್ಲಿ ಚಿಂತನೆ ನಡೆಸಲಾಗಿದೆ.

ಮಾಹಿತಿ ಕೊರತೆ..!

ನ್ಯಾಯಾಲಯದಲ್ಲಿನ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾಡಳಿತ, ಸರಕಾರ ನ್ಯಾಯಾಲಯಕ್ಕೆ ಸಮರ್ಪಕವಾದ ಮಾಹಿತಿ ನೀಡುವದರಲ್ಲಿ ಎಡವಿರುವದನ್ನು ಇಲ್ಲಿ ಗಮನಿಸಬಹುದಾಗಿದೆ. ೪೯ವರ್ಷಗಳ ಹಿಂದೆ ಮುಳುಗಡೆ ಪ್ರದೇಶಕ್ಕೆ ಬದಲಾಗಿ ಮುಳುಗಡೆಯಾದ ಪ್ರದೇಶಕ್ಕಿಂತ ಮೂರು ಪಟ್ಟು ಜಾಗ ನೀಡುವಂತೆ ಸರಕಾರ ಸೂಚಿಸಿತ್ತು. ಇದು ೧೧,೭೦೦ ಎಕರೆಯಷ್ಟಾಗಲಿದ್ದು, ಬದಲಿಗೆ ಸರಕಾರ ೧೮,೦೦೦ ಎಕರೆ ನೀಡುವಂತೆ ಸೂಚಿಸಿತ್ತು. ಅಂದು ಇಂದಿನAತೆ ಜನಸಂಖ್ಯೆ ಇರಲಿಲ್ಲ. ಖಾಲಿ ಜಾಗಗಳಿದ್ದವು. ಇಂದು ಜನಸಂಖ್ಯೆಗನುಗುಣವಾಗಿ ಖಾಲಿ ಜಾಗಗಳಲ್ಲಿ ಜನರು ನೆಲೆಸಿ ಜನವಸತಿ ಪ್ರದೇಶಗಳಾಗಿವೆಯಲ್ಲದೆ, ಸರಕಾರಿ ಉದ್ದೇಶಗಳಿಗೂ ಬಹುತೇಕ ಜಾಗ ಬಳಕೆಯಾಗಿವೆ. ಮುಂದಕ್ಕೂ ಸರಕಾರಿ ಉದ್ದೇಶಕ್ಕೆ ಜಾಗದ ಅವಶ್ಯಕತೆಯಿದೆ. ಅಲ್ಲದೆ, ಇದೀಗ ಬಫರ್‌ಝೋನ್ ವಲಯಕ್ಕೆ ಸಂಬAಧಿಸದAತೆ ಗಡಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇದರಲ್ಲೂ ಬಹುತೇಕ ಜಾಗ ಗುರುತಿಸಲಾಗಿದೆ. ಇಷ್ಟೆಲ್ಲ ವಿಚಾರಗಳಿರುವಾಗ ಇದಾವುದನ್ನು ಪರಿಗಣಿಸದೆ ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಕೂಡ ಇದಾವದನ್ನೂ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸದೇ ಇರುವದರಿಂದ ನ್ಯಾಯಾಲಯವು ಸರಕಾರದ ಹಿಂದಿನ ತೀರ್ಮಾನದನ್ವಯ ತೀರ್ಪು ನೀಡಿದೆ. ಇನ್ನಾದರೂ ಸಮಗ್ರ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಮರು ಪರಿಶೀಲನೆಗಾಗಿ ಮೇಲ್ಮನವಿ ಸಲ್ಲಿಸಿದಲ್ಲಿ ಕೊಡಗಿನಲ್ಲಿ ಜಾಗ-ಜನರು ಉಳಿಯಲು ಸಾಧ್ಯ..!