ಸೋಮವಾರಪೇಟೆ, ಅ. ೨೬: ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ದ್ವಿಚಕ್ರ ವಾಹನ ಚಾಥಾ ನಡೆಯಿತು.

ಇಲ್ಲಿನ ಜೇಸೀ ವೇದಿಕೆ ಮುಂಭಾಗದಿAದ ಪ್ರಾರಂಭವಾದ ಜಾಥಾಕ್ಕೆ ವೈದ್ಯರಾದ ಓ.ವಿ. ಕೃಷ್ಣಾನಂದ್ ಅವರು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ರೋಟರಿ ಸಂಸ್ಥೆ ಜಗತ್ತಿನಿಂದ ಪೋಲಿಯೋ ನಿರ್ಮೂಲನೆ ಮಾಡಲು ಸರ್ಕಾರ, ಎನ್‌ಜಿಒ ಮತ್ತು ಸಂಘ ಸಂಸ್ಥೆಗ ಳೊಂದಿಗೆ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದರು. ಪ್ರಪಂಚದ ಎಲ್ಲ ದೇಶಗಳಲ್ಲಿ ಪೊಲಿಯೋ ನಿರ್ಮೂಲನೆ ಯಾದರೂ, ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನಗಳಲ್ಲಿ ಇನ್ನೂ ಉಳಿದಿರುವುದರಿಂದ ಪೊಲಿಯೋ ಲಸಿಕೆ ಅನಿವಾರ್ಯವಾಗಿದೆ. ಅಮೇರಿಕಾದಲ್ಲಿ ಕಳೆದ ೧೯೯೩ ರಲ್ಲಿಯೇ ಪೊಲಿಯೋ ಮುಕ್ತವಾದರೂ, ಮುನ್ನೆಚ್ಚರಿಕೆಗಾಗಿ ಇಂದಿಗೂ ಲಸಿಕೆ ಕಾರ್ಯಕ್ರಮ ಮುಂದುವರೆದಿದೆ. ಭಾರತ ೨೦೧೧ರಿಂದ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದೆ. ಆದರೂ ನಾವು ಲಸಿಕೆ ಮುಂದುವರೆಸ ಬೇಕಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕೆಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರ ಮಾತನಾಡಿ, ಪೊಲಿಯೋ ಮುಕ್ತ ಭಾರತ ಮಾಡಲು ರೋಟರಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ರೋಟರಿ ಅಧ್ಯಕ್ಷ ಎಂ.ಎA. ಪ್ರಕಾಶ್‌ಕುಮಾರ್, ಕಾರ್ಯದರ್ಶಿ ಡಿ.ಪಿ. ಧರ್ಮಪ್ಪ, ಮಾಜೀ ಅಧ್ಯಕ್ಷರಾದ ಪಿ.ಕೆ. ರವಿ, ಹೆಚ್.ಸಿ. ನಾಗೇಶ್, ಡಾ. ರಾಕೇಶ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಾಥಾದಲ್ಲಿ ೫೦ಕ್ಕೂ ಅಧಿಕ ಮಂದಿ ಸೈಕಲ್ ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಜಾಥಾ ತೆರಳಿ ಪೋಲಿಯೋ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.