ಮಡಿಕೇರಿ, ಅ. ೨೬: ತೀರಾ ಬೆಲೆ ಕುಸಿತ, ಫಸಲು ಹಾನಿಯಿಂದಾಗಿ ಕಂಗೆಟ್ಟಿದ್ದ ಬೆಳೆಗಾರರಲ್ಲಿ ಪ್ರಸ್ತುತ ಕರಿಮೆಣಸಿನ ಬೆಲೆಯಲ್ಲಿ ಒಂದಷ್ಟು ಹೆಚ್ಚಳ ಕಂಡುಬರುತ್ತಿರುವುದು ತುಸು ಸಂತಸ ಮೂಡಿಸಿದೆ. ಕಳೆದ ಹಲವು ಸಮಯಗಳಿಂದ ಕರಿಮೆಣಸು ಬೆಲೆ ನಿಂತ ನೀರಾಗಿತ್ತು. ಹವಾಮಾನದ ವೈಪರೀತ್ಯದಿಂದ ಫಸಲೂ ನಾಶವಾಗಿದೆ. ಇದೀಗ ಕೆಲವು ದಿನಗಳಿಂದ ಬೆಲೆಯಲ್ಲಿ ಒಂದಷ್ಟು ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ.
ಕಳೆದ ೨೦-೨೫ ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ರೂ. ೩೫೦- ೩೬೦ ರಷ್ಟಿದ್ದ ಧಾರಣೆ ಇದೀಗ ಸುಮಾರು ೪೫೦- ೪೭೦ರ ತನಕ ಏರಿಕೆಯಾಗಿದೆ. ಇದು ಫಸಲಿನ ಸಮಯವಲ್ಲವಾದರೂ ಮೆಣಸು ಸಂಗ್ರಹವಿಟ್ಟುಕೊAಡಿದ್ದವರಿಗೆ ಈಗಿನ ಬೆಲೆಯಿಂದಾಗಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಆದರೆ ಪ್ರಸ್ತುತದ ಹವಾಮಾನ ವೈಪರೀತ್ಯವನ್ನು ಗಮನಿಸಿದರೆ ಮುಂದಿನ ಫಸಲಿಗೂ ಧಕ್ಕೆಯಾಗಿದೆ.
ಉತ್ತರ ಭಾರತದಲ್ಲಿ ಪ್ರಸ್ತುತ ಕರಿಮೆಣಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಚಳಿಗಾಲದಲ್ಲಿ ಇದರ ಬಳಕೆ ಸಾಧಾರಣವಾಗಿ ತುಸು ಹೆಚ್ಚಳವಾಗುತ್ತದೆ. ಇದರೊಂದಿಗೆ ಈ ತನಕ ಇದ್ದ ಕೊರೊನಾ ಲಾಕ್‌ಡೌನ್ ಪರಿಸ್ಥಿತಿ ತೆರವಾಗಿರುವದೂ ಒಂದಷ್ಟು ಬೆಲೆ ಹೆಚ್ಚಳಕ್ಕೆ ಕಾರಣವೆನ್ನಲಾಗುತ್ತಿದೆ. ಇದು ಹೀಗೆಯೇ ಮುಂದುವರಿಯಲಿದೆಯೇ ಅಥವಾ ಇನ್ನಷ್ಟು ಹೆಚ್ಚಳವಾಗಲಿದೆಯೇ ಎಂಬದನ್ನು ಖಚಿತವಾಗಿ ಹೇಳಲು ಸಾಧ್ಯವಾಗದು ಎನ್ನುತ್ತಾರೆ ಹಲವು ವ್ಯಾಪಾರಸ್ಥರು.