ಸೋಮವಾರಪೇಟೆ, ಅ.೨೫: ಮುಂಬರುವ ಜಿ.ಪಂ., ತಾ.ಪಂ. ಸೇರಿದಂತೆ ವಿಧಾನ ಪರಿಷತ್ ಹಾಗೂ ವಿಧಾನ ಸಭಾ ಚುನಾವಣೆ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಪ್ರತಿಯೋರ್ವ ಕಾರ್ಯಕರ್ತನೂ ಶ್ರಮಿಸಬೇಕು. ಪಕ್ಷ ಸಂಘಟನೆಯತ್ತ ಈಗಿನಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ನಗರ ಕಾಂಗ್ರೆಸ್‌ನ ಪ್ರಜಾ ಪ್ರತಿನಿಧಿ ಹಾಗೂ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬಲಗೊಳಿಸಬೇಕು. ಬಿಜೆಪಿಯ ದುರಾಡಳಿತವನ್ನು ಪ್ರತಿ ಮನೆಗೂ ತಲುಪಿಸಿ ಜಾಗೃತಿ ಮೂಡಿಸಬೇಕು. ಬಿಜೆಪಿ ಆಡಳಿತದಿಂದ ಜನ ಸಾಮಾನ್ಯರು ಭ್ರಮನಿರಶನ ಗೊಂಡಿದ್ದು, ಕಾಂಗ್ರೆಸ್ ಬಗ್ಗೆ ನಂಬಿಕೆ ಹೊಂದುತ್ತಿದ್ದಾರೆ ಎಂದು ಧರ್ಮಜ ಹೇಳಿದರು.

ಪ್ರತಿ ಬೂತ್‌ನಲ್ಲಿ ೨೧ ಮಂದಿಯ ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳ ಬೇಕು. ಆ ಮೂಲಕ ಎಲ್ಲಾ ಬೂತ್ ಗಳಲ್ಲೂ ಪಕ್ಷವನ್ನು ಬಲಪಡಿಸಬೇಕು. ಚುನಾವಣೆಯಲ್ಲಿ ಯಾರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದರೂ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭ ಪ್ರಜಾ ಪ್ರತಿನಿಧಿ ಹಾಗೂ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು, ಬ್ಲಾಕ್ ಉಪಾಧ್ಯಕ್ಷ ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಜಿ.ಪಂ. ಮಾಜಿ ಸದಸ್ಯ ಸಂಜಯ್ ಜೀವಿಜಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ಡಿಸೋಜ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್, ಪ.ಪಂ. ಉಪಾಧ್ಯಕ್ಷ ಸಂಜೀವ ಸೇರಿದಂತೆ ಇತರರು ಭಾಗವಹಿಸಿದ್ದರು.