ಮಡಿಕೇರಿ, ಅ. ೨೫: ತಾ. ೨೪ ರಂದು ಹೊದ್ದೂರು ಗ್ರಾಮದ ಚೆಟ್ಟಿಮಾಡ ಐನ್ ಮನೆಯಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ ನಡೆಯಿತು . ಇದು ಗೌಡ ಜನಾಂಗದ ಐನ್‌ಮನೆಯಲ್ಲಿ ನಡೆದ ಮೊದಲ ಸಂಸ್ಕೃತಿ ಶಿಬಿರವಾಗಿದ್ದು, ಕುಟುಂಬದ ಸದಸ್ಯರೆಲ್ಲಾ ಸಂಸ್ಕೃತಿಯ ಆಚಾರ- ವಿಚಾರ, ಪದ್ಧತಿ, ಸಂಪ್ರದಾಯಗಳನ್ನು ಒಟ್ಟಿಗೆ ಕಲಿಯಲು ತೊಡಗಿರುವುದು ವಿಶೇಷ. ಶಿಬಿರದಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಸೇರಿದ್ದರು.
ನಿವೃತ್ತ ಶಿಕ್ಷಕಿ ಚೆಟ್ಟಿಮಾಡ ಶಾರದೆ ಚೆಟ್ಟಿಯಮ್ಮನ ಅವರ ಪ್ರಾರ್ಥನೆಯೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಚೆಟ್ಟಿಮಾಡ ಕುಟುಂಬದ ಅಧ್ಯಕ್ಷ ಬಾಲಕೃಷ್ಣ ಸ್ವಾಗತಿಸಿದರು. ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಕಡ್ಲೇರ ತುಳಸಿ ಮೋಹನ್, ಮಾಜಿ ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರು ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿದರು. ರಾಜ್ಯಸರ್ಕಾರ ನಮ್ಮ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಗುರುತಿಸಿ ಅಕಾಡೆಮಿಯನ್ನು ಸ್ಥಾಪಿಸಿ ಕೊಟ್ಟಿದೆ. ರಾಜ್ಯ ಮಟ್ಟದಲ್ಲಿಯೇ ಅಸ್ಥಿತ್ವದಲ್ಲಿರುವ ನಮ್ಮ ಅರೆಭಾಷೆಯನ್ನು ಎಲ್ಲರೂ ಯಾವುದೇ ಹಿಂಜರಿಕೆ ಇಲ್ಲದೆ ಮಾತನಾಡಿ. ಸಂಸ್ಕೃತಿ ಸಾಹಿತ್ಯದ ಉಳಿವಿಗೆ ಭಾಷೆಯೇ ಮೂಲ ಕಾರಣ ಎಂದರು. ಅತಿಥಿಗಳಾದ ಮೂಡಗದ್ದೆ ವಿನೋದ್ ಆಕಾಶವಾಣಿ ಉದ್ಘೋಷಕರು ಮಡಿಕೇರಿ ಮಾತನಾಡಿ, ಒಂದು ಕುಟುಂಬದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಆಗಿರುವುದು ಅಳಿವಿನ ಅಂಚಿನಲ್ಲಿ ಇರುವ ಐನ್‌ಮನೆ ಸಂಸ್ಕೃತಿಗೆ ಮಾದರಿಯಾಗಿದೆ ಎಂದು ನುಡಿದರು. ಮತ್ತೊಬ್ಬ ಅತಿಥಿ ತೆಕ್ಕಡೆ ಬಿ.ಕುಮಾರಸ್ವಾಮಿ ಮಾತನಾಡಿ, ಮನೆಯೆ ಮೊದಲ ಪಾಠಶಾಲೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ - ವಿಚಾರ , ಪದ್ಧತಿಯ ಪರಿಚಯ ಮನೆಯಿಂದಲೇ ಆಗಬೇಕು ಅದಕ್ಕೆ ಮಾದರಿ ಚೆಟ್ಟಿಮಾಡ ಮನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತಳೂರು ಯಶೋಧ ಅವರು ಪದ್ಧತಿ ಸೋಬಾನೆ ಬಗ್ಗೆ ಮಾತನಾಡಿದರು. ಕುಟುಂಬದ ಅಧ್ಯಕ್ಷ ಚೆಟ್ಟಿಮಾಡ ಬಾಲಕೃಷ್ಣ ಕುಟುಂಬದಲ್ಲಿ ಇಂತಹ ಒಂದು ಶಿಬಿರ ನಮ್ಮ ಮನೆಯಲ್ಲಿ ನಡೆದಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಚೆಟ್ಟಿಮಾಡ ಕುಟುಂಬದ ಕಾರ್ಯದರ್ಶಿ ಲಕ್ಷö್ಮಣ ಆಯೋಜಿಸಿದ್ದರು. ನಿರೂಪಣೆಯನ್ನು ಕಲಾವತಿ ಲಕ್ಷö್ಮಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ನಿವೃತ್ತ ಶಿಕ್ಷಕ ಗೋಪಾಲ ಸಿ.ಪಿ. ಸುಮ, ಮಾಜಿ ಗ್ರಾಮಪಂಚಾಯಿತಿ ಸದಸ್ಯೆ ಸಿ.ವಿ. ರಘುನಾಥ್, ಸಿ.ಕೆ. ರಂಜಿನಿ, ಸಂಘದ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.