ಮಡಿಕೇರಿ, ಅ. ೨೬: ಕೊಡಗಿನ ಹೋಂಸ್ಟೇ, ಲಾಡ್ಜ್ ರೆಸಾರ್ಟ್ಗಳಲ್ಲಿ ತಂಗುವ ಪ್ರವಾಸಿಗರ ಪ್ರಯಾಣಕ್ಕೆ ವೈಟ್ಬೋರ್ಡ್ ಟ್ಯಾಕ್ಸಿಗಳನ್ನು ಒದಗಿಸುತ್ತಿದ್ದು, ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು, ಜಿಲ್ಲೆಯ ಕೆಲವು ಹೋಂಸ್ಟೇ, ಲಾಡ್ಜ್, ರೆಸಾರ್ಟ್ಗಳಲ್ಲಿ ತಂಗುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳಿಗೆ ತೆರಳಲು ಕಾನೂನು ಬಾಹಿರವಾಗಿರುವ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ಒದಗಿಸಲಾಗುತ್ತಿದೆ. ವೈಟ್ ಬೋರ್ಡ್ ವಾಹನಗಳ ವಾಣಿಜ್ಯ ಬಳಕೆಗೆ ಅವಕಾಶವಿಲ್ಲ. ಕಡಿಮೆ ಬಾಡಿಗೆ ಪಡೆದುಕೊಂಡು ಪ್ರವಾಸಿಗರನ್ನು ಕರೆದೊಯ್ಯುವ ಕಾನೂನು ಬಾಹಿರ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು. ಪ್ರವಾಸಿಗರಿಗೆ ಹಳದಿ ಬೋರ್ಡ್ ಇರುವ ವಾಹನವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಕಾನೂನು ಬಾಹಿರ ವಾಹನಗಳ ಪಟ್ಟಿ ಮಾಡಿ ಆರ್ಟಿಒ ಹಾಗೂ ಜಿಲ್ಲಾಧಿಕಾರಿಗೆ ನೀಡಿದ್ದು, ೧ ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ವೈಟ್ ಬೋರ್ಡ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಸಂದರ್ಭ ಅಪಘಾತ ಸಂಭವಿಸಿದರೆ ಅಪಘಾತ ವಿಮೆ ಅಥವಾ ಜೀವ ವಿಮೆ ಸಿಗುವುದಿಲ್ಲ. ಆದ್ದರಿಂದ ಪ್ರವಾಸಿಗರಿಗೆ ಹಳದಿ ಬೋರ್ಡ್ ಇರುವ ವಾಹನಗಳನ್ನು ಬಳಕೆಗೆ ನೀಡಬೇಕು. ಪ್ರಯಾಣಕ್ಕೆ ಸಂಘಟನೆಯಿAದಲೂ ವಾಹನಗಳನ್ನು ನೀಡಲಾಗುತ್ತದೆ. ಈ ಸಂಬAಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಸಂಘದ ಪದಾಧಿಕಾರಿಗಳು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ತಿರುಪತಿ ಬಿ.ಸಿ, ಪರಶುರಾಮ್, ಗೌರವಾಧ್ಯಕ್ಷ ರಫೀಕ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ವಿ. ರವಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ‘ಶಕ್ತಿ’ ಕಾರ್ಯಾಲಯಕ್ಕೆ ಬಂದ ಪದಾಧಿಕಾರಿಗಳು ಕಾಫಿ ತೋಟಗಳಿಗೆ ಕಾರ್ಮಿಕರನ್ನೂ ಕೂಡಾ ಖಾಸಗಿ ವಾಹನಗಳಲ್ಲಿ ಬಾಡಿಗೆ ಮೂಲಕ ಕರೆದೊಯ್ಯಲಾಗುತ್ತಿದ್ದು, ಇದಕ್ಕೂ ಅರಿಶಿನ ಬೋರ್ಡ್ನ ಜೀಪು, ವ್ಯಾನ್ ಗಳನ್ನು ಬಳಸುವಂತೆ ಸಂಬAಧಿಸಿ ದವರು ಆದೇಶ ನೀಡಬೇಕು ಎಂದರು. ಕೇರಳದಿಂದ ಕೊಡಗಿಗೆ ಬರುವ ಬಾಡಿಗೆ ವಾಹನಗಳಿಗೆ ರಾಜ್ಯ ಸರ್ಕಾರ ಸುಮಾರು ೨ ಸಾವಿರ ರೂಪಾಯಿ ಶುಲ್ಕ ವಿಧಿಸಿದ್ದು, ಅದನ್ನು ವಸೂಲಿ ಮಾಡಲು ಗಡಿಗಳಲ್ಲಿ ಯಾವದೇ ವ್ಯವಸ್ಥೆ ಇಲ್ಲದ್ದರಿಂದ ಕೋಟ್ಯಂತರ ರೂಪಾಯಿ ಕರ್ನಾಟಕ ಸರ್ಕಾರಕ್ಕೆ ವಂಚನೆ ಆಗುತ್ತಿದೆ ಎಂದು ಪದಾಧಿಕಾರಿಗಳು ವಿವರಿಸಿದರು. ಕೂಡಲೇ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಬಗ್ಗೆ ಕಾರ್ಯೋನ್ಮುಖವಾಗಬೇಕು ಎಂದು ಪತ್ರಿಕೆ ಮೂಲಕ ಆಗ್ರಹಿಸಿದರು.