ಸೋಮವಾರಪೇಟೆ, ಅ. ೨೬: ರೈತರು ತಮ್ಮ ಕೃಷಿ ಪ್ರದೇಶಕ್ಕೆ ನೀರು ಹಾಯಿಸಲು ಬೋರ್‌ವೆಲ್‌ಗಳಿಗೆ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಇಲಾಖಾ ಸಿಬ್ಬಂದಿಗಳು ತೆರವುಗೊಳಿಸುತ್ತಿರುವ ಕ್ರಮ ಖಂಡನೀಯ. ತಕ್ಷಣ ಇದನ್ನು ಸ್ಥಗಿತಗೊಳಿಸಬೇಕೆಂದು ಕಿರಗಂದೂರು ಗ್ರಾಮ ಸಭೆಯಲ್ಲಿ ರೈತರು ಆಗ್ರಹಿಸಿದರು.
ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಅಧ್ಯಕ್ಷ ಎಸ್.ಕೆ. ರಘು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ನೆರೆಯ ಹಾಸನ, ದಕ್ಷಿಣಕನ್ನಡ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕೃಷಿ ಉದ್ದೇಶಕ್ಕೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಆದರೆ ಕೊಡಗಿನಲ್ಲಿ ರೈತರು ಕೃಷಿಗಾಗಿ ಸಂಪರ್ಕ ಪಡೆದಿರುವ ವಿದ್ಯುತ್ ಮಾರ್ಗವನ್ನು ಇಲಾಖಾ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ. ಕೊಡಗಿನಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರು ಕಾಫಿ ಬೆಳೆಯನ್ನೂ ಬೆಳೆಯುತ್ತಿದ್ದು, ಇದರೊಂದಿಗೆ ಇತರ ಕೃಷಿಯನ್ನೂ ಕೈಗೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಧಿಕಾರಿಗಳು ವಿದ್ಯುತ್ ಸ್ಥಗಿತಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಗ್ರಾಮಸ್ಥರಾದ ಮುದ್ದಪ್ಪ, ಶ್ಯಾಂಪ್ರಸಾದ್ ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇಲಾಖೆಯ ಶಾಖಾಧಿಕಾರಿ ರಮೇಶ್, ಕೃಷಿ ಉದ್ದೇಶಕ್ಕೆ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುತ್ತಿಲ್ಲ. ಆದರೆ ಕಾಫಿ ತೋಟಗಳಿಗೆ ಪಡೆದಿರುವ ಸಂಪರ್ಕವನ್ನು ತೆಗೆಯಲಾಗುತ್ತಿದೆ. ಕಾಫಿಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಿರುವುದರಿಂದ ಹೀಗಾಗಿದೆ. ಇದನ್ನು ಸರ್ಕಾರದ ಮಟ್ಟದಲ್ಲಿಯೇ ಪರಿಹರಿಸಬೇಕೆಂದರು.
ಈ ಬಗ್ಗೆ ಸಭೆಯಲ್ಲಿ ಕೆಲಕಾಲ ಚರ್ಚೆ ನಡೆದು, ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಶಾಲೆ, ಅಂಗನವಾಡಿಗಳ ಸನಿಹ ಹಾಗೂ ಕಟ್ಟಡದ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ಸಭೆಗೆ ತಿಳಿಸಿದರು.
ಸಭೆಗೆ ಕಾರ್ಮಿಕ ಇಲಾಖೆ, ಮೀನುಗಾರಿಕೆ, ಪಶುವೈದ್ಯಕೀಯ, ಆಹಾರ ಇಲಾಖೆ ಅಧಿಕಾರಿಗಳು ಗೈರಾದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಎಲ್ಲಾ ಇಲಾಖಾಧಿಕಾರಿಗಳು ಹಾಜರಾಗಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಿರಗಂದೂರು ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಮತ್ತು ಕರಿಮೆಣಸು, ಕಿತ್ತಳೆ ಬೆಳೆ ಅಪಾರ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದರು. ಈ ಬಗ್ಗೆ ಗ್ರಾಮ ಪಂಚಾಯಿತಿಯಿAದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪಿಡಿಓ ತಿಳಿಸಿದರು. ತಾಕೇರಿ, ಕಿರಗಂದೂರು ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಮಾಡಬೇಕು. ತಡೆಗೋಡೆಗಳ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಸ್ಯೆ ಮುಕ್ತ ಪಂಚಾಯಿತಿಯನ್ನಾಗಿ ಮಾಡಲು ಆಡಳಿತ ಮಂಡಳಿಯೊAದಿಗೆ ಸಾರ್ವಜನಿಕರು ಹಾಗೂ ಎಲ್ಲಾ ಇಲಾಖಾಧಿಕಾರಿಗಳೂ ಸಹಕಾರ ನೀಡಬೇಕೆಂದು ಅಧ್ಯಕ್ಷ ರಘು ಅವರು ಮನವಿ ಮಾಡಿದರು.
ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್‌ಕುಮಾರ್ ಭಾಗವಹಿಸಿ ದ್ದರು. ಸಭೆಯಲ್ಲಿದ್ದ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆ ಮೂಲಕ ಅನುಷ್ಠಾನಕ್ಕೆ ತರಲಾಗಿರುವ ವಿವಿಧ ಯೋಜನೆಗಳು, ರೈತರಿಗೆ ಲಭಿಸುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಶುಭಾರಾಣಿ, ಸದಸ್ಯರುಗಳಾದ ಬೆಳ್ಳಿಯಪ್ಪ, ಸುದೇವ, ತಾರಾ ಸುಧೀರ್, ರುದ್ರಪ್ಪ, ತಿಮ್ಮಯ್ಯ, ಸುಮಿತ್ರ, ಕುಸುಮ, ಅಭಿವೃದ್ಧಿ ಅಧಿಕಾರಿ ಟಿ.ಎನ್. ರಜನಿ ಸೇರಿದಂತೆ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.