ಮಡಿಕೇರಿ, ಅ.೨೫: ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿಯ ವಾರ್ಷಿಕ ಮಹಾಸಭೆ ಹಾಗೂ ನಾರಾಯಣ ಗುರು ಜಯಂತಿ ಆಚರಣೆ ಇತ್ತೀಚೆಗೆ ಬಾಲಭವನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಘÀದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಿ.ಎಸ್. ರಮೇಶ್ ಮಕ್ಕಂದೂರು ಅವರು ಮಾತನಾಡಿ, ನಾರಾಯಣ ಗುರುಗಳಂತೆ ಪ್ರತಿಯೊಬ್ಬರೂ ಜಾತಿ ಪದ್ಧತಿ, ಅಂಧಕಾರ, ಮೌಢ್ಯಗಳ ವಿರುದ್ಧ ಹೋರಾಡಬೇಕೆಂದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಯುವ ಜನಾಂಗಕ್ಕೆ ನಮ್ಮ ಸಂಪ್ರದಾಯ, ಆಚಾರ - ವಿಚಾರ, ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು. ನಗರಸಭಾ ಸದಸ್ಯೆ ಚಿತ್ರಾವತಿ ಪೂವಪ್ಪ ಮಾತನಾಡಿ, ಬಿಲ್ಲವ ಸಮಾಜ ವಿದ್ಯೆಗೆ ಹೆಚ್ಚಿನ ಒತ್ತು ನೀಡಬೇಕೆಂದರು.

ಮಾಜಿ ಅಧ್ಯಕ್ಷ ಬಿ.ಎಂ. ರಾಜಶೇಖರ್ ಮಾತನಾಡಿ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮಿಗಳು ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದು, ಅಖಿಲ ಭಾರತ ಧಾರ್ಮಿಕ ಸಂಸ್ಥೆಯ ಸ್ಥಾಪನೆ ಹಿನ್ನೆಲೆಯಲ್ಲಿ ಎಂದು ತಿಳಿಸಿದರು. ಬಿಲ್ಲವ ಸಮಾಜದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಮಾತನಾಡಿ ಸಮಾಜದ ವತಿಯಿಂದ ಕೊರೊನಾ ಹಾಗೂ ಭೂಕುಸಿತದ ಕಾರಣದಿಂದಾಗಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲು ಸಾಧ್ಯವಾಗಲಿಲ್ಲ ಎಂದರಲ್ಲದೆ, ಬಿಲ್ಲವ ಸಮಾಜದ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕೆ. ರವೀಂದ್ರ, ಬಿ.ಎಂ. ಶೇಷಪ್ಪ, ಕಾರ್ಯಾಧ್ಯಕ್ಷ ಬಿ.ಎ. ಅರುಣ್ ಕುಮಾರ್, ಮದೆ ಹೋಬಳಿ ಉಪಾಧ್ಯಕ್ಷ ಬಿ.ಸಿ. ಬಾಲಕೃಷ್ಣ ಇದ್ದರು. ಕಾರ್ಯದರ್ಶಿ ಮನೋಹರ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಬಿ.ಕೆ. ಮಹೇಶ್ ಲೆಕ್ಕಪತ್ರ ಮಂಡಿಸಿದರು.

ಮಾಜಿ ಅಧ್ಯಕ್ಷರಾದ ವಿನೋದ್‌ಕುಮಾರ್ ಹಾಗೂ ಸದಸ್ಯರು ಹಾಜರಿದ್ದರು. ಇತ್ತೀಚೆಗೆ ನಿಧನರಾದ ಸಮಾಜದ ಸದಸ್ಯರ ಆತ್ಮಕ್ಕೆ ಶಾಂತಿಕೋರಿ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು. ಬಿ.ಎಸ್. ಜಯಪ್ಪ ಸ್ವಾಗತಿಸಿ, ಗಾನವಿ ಪ್ರಾರ್ಥಿಸಿದರು.