ಗೋಣಿಕೊಪ್ಪಲು, ಅ.೨೪: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಚಿತಾಗಾರ ಘಟಕ ನಿರ್ಮಾಣಕ್ಕೆ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಭೂಮಿ ಪೂಜೆ ನೆರವೇರಿಸಿದರು. ಈ ಮೂಲಕ ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ರೋಟರಿ ಜಿಲ್ಲೆಯ ಮೊದಲ ಸಂಸ್ಕಾರ್ ಯೋಜನೆಗೆ ಕೊಡಗಿನಲ್ಲಿ ಚಾಲನೆ ದೊರಕಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ರುದ್ರಭೂಮಿಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.
ಕೊಡಗು ಜಿಲ್ಲೆಯ ಐದು ರೆವಿನ್ಯೂ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಸಂಸ್ಕಾರ್ ಯೋಜನೆಯಡಿ ಚಿತಾಗಾರ ಸ್ಥಾಪಿಸಲಾಗುವುದೆಂದು ರೋಟರಿ ರಾಜ್ಯಪಾಲರಾದ ರವೀಂದ್ರ ಭಟ್ ತಿಳಿಸಿದರು.
ರೋಟರಿ ಕ್ಲಬ್‌ನ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಜಿಲ್ಲಾ ಯೋಜನೆಯಾಗಿ ಈ ವರ್ಷ ಸಂಸ್ಕಾರ ಯೋಜನೆ ಕೈಗೊಳ್ಳಲಾಗಿದ್ದು, ಜಿಲ್ಲೆಯ ೨೨ ಗ್ರಾಮಗಳಲ್ಲಿ ಉತ್ತಮ ರುದ್ರ ಭೂಮಿಯನ್ನು ಅಂದಾಜು ರೂ. ೬ ಲಕ್ಷ ವೆಚ್ಚದಲ್ಲಿ ರೋಟರಿ ಮತ್ತು ಗ್ರಾಮ ಸಮಿತಿ ಜಂಟಿಯಾಗಿ ನಿರ್ಮಿಸಲಿದೆ. ರೋಟರಿ ಕ್ಲಬ್ ವತಿಯಿಂದ ಹಲವಾರು ಜನಪರ ಕೆಲಸಗಳು ನಡೆಯುತ್ತಿವೆ. ಗೋಣಿಕೊಪ್ಪ ರೋಟರಿ ಕ್ಲಬ್ ಉತ್ತಮ ಕಾರ್ಯಕ್ರಮ ರೂಪಿಸುತ್ತಿದೆ. ಗ್ರಾ.ಪಂ.ಯ ಸಹಕಾರದಿಂದ ಘಟಕ ಆರಂಭಿಸಲು ಅನುಕೂಲವಾಗಿದೆ ಎಂದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಯೋಜನೆಯನ್ನು ಮೊದಲ ಬಾರಿಗೆ ಗೋಣಿಕೊಪ್ಪಲಿಗೆ
(ಮೊದಲ ಪುಟದಿಂದ) ನೀಡಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಮಾದರಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ತೀತಮಾಡ ನೀತಾ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ಗ್ರಾ.ಪಂ. ಅಧ್ಯಕ್ಷರಾದ ಚೈತ್ರ, ಸದಸ್ಯರಾದ ಜಿ.ಕೆ.ಗೀತಾ, ರೋಟರಿ ವಲಯ ಕಾರ್ಯದರ್ಶಿ ಹೆಚ್ ಎಸ್. ವಸಂತ್ ಕುಮಾರ್. ವಲಯ ಸೇನಾನಿ ಆದಿತ್ಯ, ಗೋಣಿಕೊಪ್ಪ ರೋಟರಿ ಸದಸ್ಯರಾದ ಅಜ್ಜಿಕುಟ್ಟಿರ ಸಜನ್, ರಾಜಶೇಖರ್, ಪ್ರಮೋದ್ ಕಾಮತ್, ಕಾಡ್ಯಮಾಡ ನೆವೀನ್, ಮೂಕಳೇರ ಬೀಟಾ ಲಕ್ಷ್ಮಣ್, ಇಮ್ಮಿ ಉತ್ತಪ್ಪ, ಎಂ.ಕೆ. ದೀನಾ, ಪಿ.ಆರ್. ವಿಜಯ್, ಕಿಶೋರ್ ಮಾದಪ್ಪ, ಮಾಜಿ ಗ್ರಾ.ಪಂ. ಸದಸ್ಯರಾದ ಸುರೇಶ್ ರೈ, ಪಿಡಿಓ ತಿಮ್ಮಯ್ಯ ಹಾಜರಿದ್ದರು.
- ಹೆಚ್.ಕೆ. ಜಗದೀಶ್