ಸಿದ್ದಾಪುರ, ಅ. ೨೪: ಸಿದ್ದಾಪುರ ದಿಂದ ಮಾಲ್ದಾರೆ ಭಾಗಕ್ಕೆ ತೆರಳುವ ಮಾರ್ಗ ಮಧ್ಯದ ಘಟ್ಟದಳ್ಳ ಬಳಿ ರಸ್ತೆಯ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ ವೀರಾಜ ಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ್ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಿದ್ದಾಪುರದಿಂದ ಮಾಲ್ದಾರೆಗೆ ತೆರಳುವ ಮಾರ್ಗಮಧ್ಯದ ಘಟ್ಟದಳ್ಳದ ಬಳಿ ಕಿರು ಸೇತುವೆಯ ಕಾಮಗಾರಿಯು ನಡೆಯುತ್ತಿದ್ದು, ಈ ಕಾಮಗಾರಿ ನಡೆಯುವ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆಯು ಕೆಸರಿನಿಂದ ಕೂಡಿದೆ. ಕಾಮಗಾರಿಯು ಮಳೆ ಆದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದ್ದು, ಮಳೆ ನೀರು ನಿಂತು ವಾಹನಗಳು ಸಂಚರಿಸಲು ಸಾಧ್ಯವಾಗದೇ ಸಮಸ್ಯೆಗಳಿವೆ ಎಂದು ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಹಾಗೂ ಸದಸ್ಯರುಗಳು ಕಾಮಗಾರಿ ಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಘಟ್ಟದಳ್ಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಡಾ. ಯೋಗಾನಂದ್ ಲೋಕೋಪಯೋಗಿ ಇಲಾಖಾಧಿಕಾರಿಗಳ ಬಳಿ ದೂರವಾಣಿ ಮೂಲಕ ಮಾತನಾಡಿ, ಈ ಭಾಗದ ಕಿರುಸೇತುವೆ ಕಾಮಗಾರಿಯನ್ನು ಸಮರ್ಪಕವಾಗಿ ಕೂಡಲೇ ಮುಕ್ತಾಯಗೊಳಿಸುವಂತೆ ತಿಳಿಸಿದರು. ಅಲ್ಲದೆ, ದೊಡ್ಡ ವಾಹನಗಳಿಗೆ ಪಾಲಿಬೆಟ್ಟ - ಮೇಕೂರು- ಹೊಸ್ಕೇರಿ ಮಾರ್ಗವಾಗಿ ಬದಲೀ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜು ಇನ್ನಿತರರು ಹಾಜರಿದ್ದರು.
-ವಾಸು.