ಮಡಿಕೇರಿ, ಅ. ೨೪: ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಪಂಚಾಯಿತಿ ವ್ಯಾಪ್ತಿಯ ಬಕ್ಕಾ ಗ್ರಾಮದಲ್ಲಿ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಮಡಿಕೇರಿಯ ಪಶು ವೈದ್ಯಕೀಯ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಪ್ರದರ್ಶನ ಮತ್ತು ಶಿಬಿರದಲ್ಲಿ ಬಕ್ಕಾ, ಪಾಲೂರು, ಬೆಟ್ಟಗೇರಿ, ಕಾರುಗುಂದ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ೫೦ಕ್ಕೂ ಹೆಚ್ಚು ಪಶುಪಾಲಕರು ತಮ್ಮ ಜಾನುವಾರುಗಳೊಂದಿಗೆ ಪಾಲ್ಗೊಂಡಿದ್ದರು. ಇದೇ ವೇಳೆ ಶಿಬಿರದಲ್ಲಿ ತಜ್ಞ ಪಶು ವೈದ್ಯರು ಭಾಗವಹಿಸಿ ಜಾನುವಾರುಗಳ ತಪಾಸಣೆ ನಡೆಸಿ ಬಂಜೆ ರಾಸುಗಳ ತಪಾಸಣೆ ಮತ್ತು ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಪಶುವೈದ್ಯರು ಆಸಕ್ತರಿಗೆ ಜಾನುವಾರುಗಳ ವೈಜ್ಞಾನಿಕ ಸಾಕಾಣಿಕೆಯ ಬಗ್ಗೆಯೂ ಮಾಹಿತಿ ನೀಡಿದರು.
ಇದರ ಜೊತೆಗೆ ಪಶುಪಾಲಕರಿಗೆ ಔಷಧಿ ಮತ್ತು ಲವಣ ಮಿಶ್ರಣ ವಿತರಣೆ ಮಾಡುವ ಕಾರ್ಯಕ್ರಮವನ್ನು ಕೂಡ ನಡೆಸಲಾಯಿತು. ಇದಾದ ಬಳಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದ ಉತ್ತಮ ತಳಿಯ ಕರು, ಹಸುಗಳನ್ನು ಗುರುತಿಸಿ ಪಶುಪಾಲಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳ ಉಪನಿರ್ದೇಶಕ ಡಾ. ಸುರೇಶ್ ಭಟ್, ಗ್ರಾ.ಪಂ. ಸದಸ್ಯರಾದ ಕಮಲ ಉತ್ತಯ್ಯ, ಗೋಪಾಲ ಸೇರಿದಂತೆ ಇನ್ನಿತರರು ಹಾಜರಿದ್ದರು.