ನಾಪೋಕ್ಲು, ಅ. ೨೫: ಯುವ ಜನತೆ ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ನಾಪೋಕ್ಲು ಗ್ರಾಮ ಪಂಚಾಯಿತಿ, ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಬೇತು ಪಿ.ಎ.ಜಿ ಗೆಳೆಯರ ಬಳಗದ ವತಿಯಿಂದ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವ ಜನತೆಯಲ್ಲಿ ಶ್ರದ್ಧೆ, ಭಕ್ತಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಕೆಟ್ಟ ಚಟಗಳ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು, ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ಯುವ ಸಬಲೀಕರಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಉಪನಿರ್ದೇಶಕರ ಹುದ್ದೆ ಖಾಲಿಯಿದೆ. ಎಲ್ಲಾ ಅಧಿಕಾರಿಗಳು ಪ್ರಭಾರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ಮನುಷ್ಯನ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ, ಹಾಗೆಯೇ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯವಾಗಿದೆ. ಯುವ ಜನತೆ ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ ಮಾತನಾಡಿದರು.

ವೇದಿಕೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಕುಂದೈರೀರ ರೇಖಾ, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲೆ ಸೌಭಾಗ್ಯ, ಬೇತು ಪಿ.ಎ.ಜಿ ಗೆಳೆಯರ ಬಳಗದ ಅಧ್ಯಕ್ಷ ಎ.ಎಂ.ಪೂಣಚ್ಚ, ಉಪಾಧ್ಯಕ್ಷ ಸೋಮಯ್ಯ, ಕಾರ್ಯದರ್ಶಿ ಎ.ಎಂ.ಮಿಟ್ಟು ಸೋಮಯ್ಯ, ಖಜಾಂಚಿ ಎ.ಬಿ. ಅರುಣ, ಮತ್ತಿತರರು ಇದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಸ್ವಾಗತಿಸಿದರು. ಕೂಡಂಡ ಸಾಬಾ ಸುಬ್ರಮಣಿ ನಿರೂಪಿಸಿ, ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ ವಂದಿಸಿದರು.