ಭಾರತದ ಇತಿಹಾಸ ಎಂದಾಕ್ಷಣ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿಯ ದಾಳಿಗಳು, ದೆಹಲಿ ಸುಲ್ತಾನರ ಅಟ್ಟಹಾಸ, ಅಲ್ಲಾವುದ್ದೀನ್ ಖಿಲ್ಜಿಯ ಕ್ರೌರ್ಯ, ಮೊಘಲರ ದಬ್ಬಾಳಿಕೆ, ಭಾರತದ ಅರಸರ ಸಾಲು ಸಾಲು ಸೋಲುಗಳು ಮತ್ತು ಆಂಗ್ಲಪಡೆಗಳ ದುರಹಂಕಾರದ ಆಳ್ವಿಕೆ. ಅದರಲ್ಲೂ ಬ್ರಿಟಿಷರ ಅತಿಕ್ರಮಣ ಕಾಲಘಟ್ಟದಲ್ಲಿ ಆದಂತಹ ಘೋರ ದುರ್ಘಟನೆಗೆ ಸಾಕ್ಷಿಯಾದ ಭೂಮಿ ಬಂಗಾಳ ಪ್ರಾಂತ್ಯ. ಈ ಒಂದು ಪ್ರದೇಶದಲ್ಲಿ ನಡೆದ ಅತ್ಯಂತ ಹೃದಯಹೀನ ಮತ್ತು ಅಮಾನವೀಯ ಘಟನೆಯನ್ನೇ ‘ಕಪ್ಪು ಕೋಣೆಯ ದುರಂತ' ಅಥವಾ ‘ಬ್ಲಾಕ್ ಹೋಲ್ ಟ್ರಾಜಿಡಿ' ಎಂದು ದಾಖಲಿಸಲಾಗಿದೆ. ಕ್ರಿ. ಶ. ೧೭೦೭ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಕಾಲವಾದ ನಂತರ ಮೊಘಲ್ ಸಾಮ್ರಾಜ್ಯ ಪತನದ ಹಾದಿ ತುಳಿಯುತಿತ್ತು ಆ ಅವಧಿಯಲ್ಲಿಯೇ ಅನೇಕ ಸಣ್ಣ-ಪುಟ್ಟ ರಾಜ್ಯಗಳು ತಲೆ ಎತ್ತಿದ್ದವು ಅವುಗಳಲ್ಲಿ ಬಂಗಾಳ, ಬಿಹಾರ ಮತ್ತು ಒರಿಸ್ಸಾ ಪ್ರಮುಖವಾಗಿತ್ತು. ಔರಂಗಜೇಬನ ಉತ್ತರಾಧಿಕಾರಿಗಳು ಅಸಮರ್ಥರಾಗಿದ್ದರಿಂದ ಬಂಗಾಳದ ರಾಜ್ಯಪಾಲ ಮುರ್ಷಿದ್-ಕ್ವಲಿ-ಜಫರ್-ಖಾನ್ ಸ್ವತಂತ್ರನಾದನು.ತದನAತರ ಈತನ ಅಳಿಯ ಪೂಜಾ-ಉದ್ದೀನ್-ಖಾನ್ ಬಂಗಾಳ ಮತ್ತು ಒರಿಸ್ಸಾ ಗಳೆರಡನ್ನೂ ತನ್ನ ಅಧೀನದಲ್ಲಿಟ್ಟುಕೊಂಡು ಬಿಹಾರದಲ್ಲಿ ಅಲಿವರ್ದಿಖಾನನನ್ನು ತನ್ನ ವೈಸರಾಯಿಯನ್ನಾಗಿ ನೇಮಿಸಿದನು. ಕ್ರಿ. ಶ. ೧೭೩೯ರಲ್ಲಿ ಆತ ಮರಣ ಹೊಂದಿದ ನಂತರ ಒಳಸಂಚು ನಡೆಸಿದ ಅಲಿವರ್ದಿಖಾನ್ ಬಂಗಾಳದ ಸಿಂಹಾಸನವನ್ನು ದುರಾಕ್ರಮಣ ಮಾಡಿ ಮೊಘಲ್ ಸಾಮ್ರಾಟನ ಸಮ್ಮತಿಯನ್ನು ಗಿಟ್ಟಿಸಿ ಕ್ರಿ. ಶ. ೧೭೪೧ರಲ್ಲಿ ಸ್ವತಂತ್ರನಾದನು. ಈತ ಒಬ್ಬ ಸಮರ್ಥ ಸೇನಾನಿ, ಸಕಲ ಯುದ್ಧವಲ್ಲಭ, ಧೃಡಮನಸ್ಕ ಹಾಗೂ ಮಹಾಚತುರ, ಪ್ರತಿಭೆಯಂತೂ ಆತನಿಗೆ ಪ್ರಕೃತಿದತ್ತವಾಗಿ ಬಂದ ವರವಾಗಿದ್ದಿತು ಆದರೆ ಆತನ ಪೂರ್ಣ ಆಳ್ವಿಕೆಯೆಲ್ಲವೂ ತೊಡಕಿನಿಂದಲೇ ಕೂಡಿ ದುರಂತಮಯವಾಗಿದ್ದಿತು. ಮುಂದೆ ಬಂಗಾಳವನ್ನು ಮುತ್ತಿದ ಮರಾಠರು ಮತ್ತು ಅಲಿವರ್ದಿನನ ನಡುವೆ ಘರ್ಷಣೆಯೂ ಆರಂಭವಾಯಿತು. ಕೊನೆಗೆ ಆತ ೧೨ಲಕ್ಷ ರೂಪಾಯಿ ಚೌತ್ ಜೊತೆಗೆ ಒರಿಸ್ಸಾವನ್ನು ಬಿಟ್ಟುಕೊಟ್ಟು ಅವರೊಡನೆ ಶಾಂತಿ ಒಪ್ಪಂದ ಮಾಡಿಕೊಂಡನು. ಪುತ್ರಸಂತಾನವಿಲ್ಲದ ಕಾರಣ ಉತ್ತರಾಧಿಕಾರದ ವಿಚಾರ ಅಲಿವರ್ದಿನನಿಗೆ ಒಂದು ಸಮಸ್ಯೆಯಾಗಿದ್ದಿತು.ಆತನ ಮೂವರು ಪುತ್ರಿಯರ ಪೈಕಿ ಇಬ್ಬರು ಅಳಿಯಂದಿರು ನಿಧನರಾಗಿದ್ದರು. ಹಾಗಾಗಿ ಕೊನೆಯ ಅಳಿಯ ಸಿರಾಜ್-ಉದ್-ದೌಲನನ್ನು ತನ್ನ ಉತ್ತರಾಧಿಕಾರಿಯಾಗಿ ಒಪ್ಪಿಕೊಂಡು ಕ್ರಿ,ಶ೧೭೫೬ರಲ್ಲಿ ಆತ ಇಹಲೋಕ ತ್ಯಜಿಸಿದನು. ತದನಂತರ ನಡೆದದ್ದೆ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದ ಮತ್ತು ಮಾಸದ ದುರಂತ. ಬಂಗಾಳದಲ್ಲಿ ನಯ ನವಾಬ ಸ್ಥಾನ ಪಡೆದಿದ್ದ ಸಿರಾಜುದ್ದೌಲ ತನ್ನ ಶಕ್ತಿ ಸಾಮರ್ಥ್ಯಗಳಿಂದ ಕೂಡಿದ ೨೩ ವರ್ಷದ ಉತ್ಸಾಹಿ ತರುಣ ಹಲವು ಆಸೆ, ಆಕಾಂಕ್ಷೆಗಳನ್ನು ಹೊತ್ತು ನಿಂತವನು. ಅಲಿವರ್ದಿ ಖಾನನು ತನ್ನ ನವಾಬ ಗಿರಿಯ ಅವಧಿಯಲ್ಲಿ ಬ್ರಿಟಿಷ ರಿಗೆ ಕೆಲವು ವ್ಯಾಪಾರದ ರಿಯಾಯಿತಿಯನ್ನು ಕೊಟ್ಟಿ ದ್ದರೂ ಕೂಡ ಯಾವುದೇ ರೀತಿಯ ಕೋಟೆಗಳನ್ನು ಕಟ್ಟಲು ಅವಕಾಶವಿತ್ತಿರಲಿಲ್ಲ. ಆದರೆ ಬ್ರಿಟಿಷರು ಅದನ್ನೂ ಮೀರಿ ಬಂಗಾಳದಲ್ಲಿ ತಮ್ಮ ವಸಾಹತುಗಳನ್ನು ನವಾಬನ ಅಪ್ಪಣೆ ಇಲ್ಲದೆ ಕೋಟೆಗಳನ್ನು ನಿರ್ಮಿಸಿದರು. ಇದರಿಂದ ಕೆರಳಿ ಕೆಂಡವಾದ ನವಾಬ ಸಿರಾಜುದೌಲ ಅದನ್ನು ನಾಶಪಡಿಸುವಂತೆ ಆಜ್ಞಾಪಿಸಿದನು. ಆದರೆ ಆಂಗ್ಲರು ನವಾಬನ ಆಜ್ಞೆ ಯನ್ನು ಪೂರ್ಣ ನಿರ್ಲಕ್ಷಿಸಿ ವ್ಯಾಪಾರದ ರಿಯಾಯಿತಿ ಗಳನ್ನು ದುರುಪಯೋಗ ಪಡಿಸಿಕೊಳ್ಳತೊಡಗಿದರು ಇದರಿಂದ ಇನ್ನಷ್ಟು ಕುಪಿತನಾದ ಸಿರಾಜುದೌಲ ಬ್ರಿಟಿಷರ ವಿರುದ್ಧ ಕಠಿಣ ನೀತಿಯನ್ನು ಕೈಗೊಂಡನು. ಅಲ್ಲದೆ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಸಿರಾಜುದೌಲ ತನ್ನ ಐವತ್ತುಸಾವಿರ ಬೃಹತ್ ಸೈನಿಕರೊಡನೆ ಧಾವಿಸಿ ಕಲ್ಕತ್ತಾದ ಮೇಲೆ ಆಕ್ರಮಣ ಮಾಡಿದರು. ಕ್ರಿ. ಶ. ೧೭೫೬ ಜೂನ್ ೪ ರಂದು ಬ್ರಿಟಿಷರ ಖಾಸಿಂ ಬಜಾರ್‌ನಲ್ಲಿರುವ ಉಗ್ರಾಣ (ಕೋಟೆ)ದ ಮೇಲೆಯೂ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡನು. ೧೭೫೬ ಜೂನ್ ೨೦ ರಂದು ವಿಲಿಯಂ ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡನು.ಅದೇ ವೇಳೆಯಲ್ಲಿ ಸಾಕಷ್ಟು ಯುದ್ಧ ಸಾಮಗ್ರಿಗಳು ಹಾಗೂ ಸೈನ್ಯವಿಲ್ಲದೆ ಗಾಬರಿಗೊಂಡ ಬ್ರಿಟಿಷ್ ಅಧಿಕಾರಿಗಳು ತಮ್ಮ ನೆರವಿಗಾಗಿ ಫ್ರೆಂಚರು ಮತ್ತು ಡಚ್ಚರ ಸಹಾಯ ಯಾಚಿಸಿದರು ಆದರೆ ಅವರಿಂದಲೂ ಆಂಗ್ಲರಿಗೆ ಯಾವುದೇ ನೆರವೂ ಲಭಿಸಲಿಲ್ಲ. ಸಿರಾಜುದೌಲನ ಬಿರುಸಿನ ಧಾಳಿಯಿಂದ ಬೆದರಿ ತತ್ತರಿಸಿದ ಕಲ್ಕತ್ತಾದ ರಾಜ್ಯಪಾಲ ಡ್ರೇಕ್ ಮತ್ತು ಮಿಂಚಿನ್ ರವರು ಕಂಪನಿಯ ಅನೇಕ ಜನರೊಂದಿಗೆ ನಗರವನ್ನು ತೊರೆದು ದೋಣಿಯಲ್ಲಿ ಪಲಾಯನ ಮಾಡಿದರು. ಉಳಿದ ಸೈನಿಕರು ‘ಹಾಲ್ ವೆಲ್' ಎಂಬ ನಿವೃತ್ತ ವೈದ್ಯನ ನೇತೃತ್ವದಲ್ಲಿ ವೀರಾವೇಶದಿಂದ ಹೋರಾಡಿ ಅಂತಿಮ ಘಟ್ಟದಲ್ಲಿ ಬ್ರಿಟಿಷರು ಸಿರಾಜುದೌಲನಿಗೆ ಶರಣಾಗತರಾದರು. ಕ್ರಿ.ಶ. ೧೭೫೬ ಜೂನ್ ೨೦ರಂದು ತನ್ನ ವಶವಾದ ೧೪೬ಮಂದಿ ಬ್ರಿಟಿಷ್ ಖೈದಿಗಳನ್ನು ೧೮ಅಡಿ ಉದ್ದ ಮತ್ತು ೧೪ ಅಡಿ ಅಗಲವಿರುವ ಯಾವುದೇ ಗಾಳಿ ಮತ್ತು ಬೆಳಕಿನ ಸಂಪರ್ಕವಿಲ್ಲದ ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದನು.ಮರುದಿನ ಕೋಣೆಯ ಬಾಗಿಲನ್ನು ತೆರೆದಾಗ ೧೨೩ಮಂದಿ ಬ್ರಿಟಿಷ್ ಖೈದಿಗಳು ಉಸಿರುಗಟ್ಟಿ ಮರಣ ಹೊಂದಿದ್ದರು.ಉಳಿದ ೨೩ಮಂದಿ ಬದುಕುಳಿದಿದ್ದರು ಅದರಲ್ಲಿ ವೈದ್ಯ ಹಾಲ್ ವೆಲ್ ಕೂಡ ಒಬ್ಬ ಎಂದು ವಿವರಿಸಿದ್ದಾನೆ. ಕ್ರಿ. ಶ. ೧೭೫೭ರಲ್ಲಿ ಪ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ಬ್ರಿಟಿಷರು ಸಿರಾಜುದ್ದೌಲನ ವಿರುದ್ಧ ದಾಳಿ ನಡೆಸಿದನು. ಕಾಳಗದಲ್ಲಿ ವೀರಾವೇಶ ದಿಂದ ಸೇಣಸಾಡಿದರೂ ಬ್ರಿಟಿಷರನ್ನು ಮಣಿಸಲು ಸಾಧ್ಯವಾಗಲಿಲ್ಲ. ಸಿರಾಜುದೌಲನ ಸೇನಾಧಿಪತಿಯ ನೆರವು ಪಡೆದ ರಾಬರ್ಟ್ ಕ್ಲೆöÊವ್ ಕದನದಲ್ಲಿ ಬಹು ಸುಲಭವಾಗಿ ಜಯಗಳಿಸಿದನು. ಕೊನೆಗೆ ಸೋತು ಬಂಧಿಯಾದ ಸಿರಾಜುದೌಲನನ್ನು ಕೊಲೆ ಮಾಡಲಾಯಿತು. ತದನಂತರದಲ್ಲಿ ಮೀರ್ ಜಾಫರ್ ನನ್ನು ಬಂಗಾಳದ ಹೊಸ ನವಾಬನನ್ನಾಗಿ ಕೂರಿಸಲಾಯಿತು. ಇದಕ್ಕೆ ಪ್ರತಿಫಲವಾಗಿ ಮೀರ್ ಜಾಫರ್ ಬ್ರಿಟಿಷರಿಗೆ ಕಲ್ಕತ್ತಾದಲ್ಲಿ ಕೋಟೆಗಳನ್ನು ಕಟ್ಟಲು ಮತ್ತು ವ್ಯಾಪಾರದ ಅನುಮತಿ ಪತ್ರ (ದಸ್ತಕ್)ವನ್ನು ನೀಡಿದನು. ಈ ಪ್ಲಾಸಿ ಕದನ ಭಾರತದ ಕದನಗಳ ಇತಿಹಾಸದಲ್ಲೊಂದು ಪ್ರಮುಖ ಮೈಲಿಗಲ್ಲಾಗಿದೆ ಅಲ್ಲದೆ ಇದು ಭಾರತೀಯ ಇತಿಹಾಸದ ದಿಕ್ಕನ್ನು ಬದಲಿಸಿದ ಯುದ್ಧವಾಗಿದ್ದರಿಂದ ಈ ಯುದ್ದವನ್ನು ‘ಬಂಗಾಳದ ಮೊದಲ ಕ್ರಾಂತಿ’ ಎಂದೇ ಪರಿಗಣಿಸಲಾಗಿದೆ.

-ಸತೀಶ್ ಕುಮಾರ್ ಎ. ಎಸ್,

ಇತಿಹಾಸ ಉಪನ್ಯಾಸಕರು,

ವೀರಾಜಪೇಟೆ.