ಮಡಿಕೇರಿ, ಅ. ೨೫: ಸ್ನಾನಕ್ಕೆಂದು ತೆರಳಿದ ಯುವತಿ ಮೃತಪಟ್ಟ ಘಟನೆ ನಗರದ ಹೋಂಸ್ಟೇಯೊAದರಲ್ಲಿ ನಡೆದಿದ್ದು, ಗ್ಯಾಸ್ ಗೀಸರ್ ಸೋರಿಕೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೂಲತಃ ಬಳ್ಳಾರಿ ತೋರಣಗಲ್ಲು ನಿವಾಸಿ ಪ್ರಸ್ತುತ ಮುಂಬೈನಲ್ಲಿ ಉದ್ಯೋಗದಲ್ಲಿರುವ ಈಶ್ವರನ್ ಹಾಗೂ ಗೋಮಲೆ ದಂಪತಿ ಪುತ್ರಿ ವಿಘ್ನೇಶ್ವರಿ (೨೪) ಮೃತ ದುರ್ಧೈವಿ. ತಾ. ೨೨ ರಂದು ಬಳ್ಳಾರಿಯ ತಮ್ಮ ನಾಲ್ವರು ಸ್ನೇಹಿತರಾದ ಅಕ್ಷಿತಾ, ಮಧುಶ್ರೀ, ಸುರಬಿ, ಕಶಿಶ್ ಸಕ್ಸೇನಾ ಜೊತೆ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಬಂದು ಬಳಿಕ ಮಡಿಕೇರಿಯ ಡೈರಿ ಫಾರಂ ಬಳಿಯ ಕೂರ್ಗ್ ವ್ಯಾಲಿ ವ್ಯೂ ಎಂಬ ಹೋಂ ಸ್ಟೇಯಲ್ಲಿ ಆಶ್ರಯ ಪಡೆದು ತಲಕಾವೇರಿ, ಭಾಗಮಂಡಲ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ತಾ. ೨೪ ರಂದು ರಾತ್ರಿ ೮.೩೦ ರ ಸುಮಾರಿಗೆ ಸ್ನಾನಕ್ಕೆಂದು ತೆರಳಿದ ವಿಘ್ನೇಶ್ವರಿ ಹಲವು ಸಮಯ ಕಳೆದರು ಬಾರದ ಹಿನ್ನೆಲೆ ಬಾಗಿಲು ಹೊಡೆದು ಪರಿಶೀಲಿಸಿದಾಗ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಳು ಎಂದು ವೈದ್ಯರು ದೃಢಪಡಿಸಿದ್ದಾರೆ.
ಹೋಂಸ್ಟೇ ಕಟ್ಟಡದ ಮಾಲೀಕ ದುಬೈನಲ್ಲಿ ನೆಲೆಸಿದ್ದು, ಸದ್ಯ ಮುಕ್ತಾರ್ ಎಂಬವರು ಹೋಂಸ್ಟೇ ನಡೆಸುತ್ತಿದ್ದಾರೆ. ಮೃತ ಪೋಷಕರ ದೂರಿನನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.
ಕ್ರಮಕ್ಕೆ ಆಗ್ರಹ
ಇಂದು ಮಡಿಕೇರಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು ಅನಧಿಕೃತ ಹೋಂ ಸ್ಟೇ ಒಂದರಲ್ಲಿ ನಡೆದಿದೆ. ಇಂತಹ ಹೋಂಸ್ಟೇಗಳನ್ನು ಮುಚ್ಚಿಸಲು ಹತ್ತಾರು ಬಾರಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸಬೇಕೆಂದು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ
ಬಿ.ಜಿ. ಅನಂತಶಯನ ಆಗ್ರಹಿಸಿದ್ದಾರೆ.