ಗೋಣಿಕೊಪ್ಪ ವರದಿ, ಅ. ೨೫: ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಕಾಫಿ ತೋಟದಿಂದ ಕಾಫಿ ಕಳವು ಮಾಡಲಾಗಿದೆ ಎಂಬ ಆರೋಪ ನಿರಾಧಾರ ಎಂದು ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ. ಆರ್. ಸುರೇಶ್ ಹೇಳಿದರು.
ಸಂಘದ ಸದಸ್ಯ ಧನಂಜಯ ಅನವಶ್ಯಕವಾಗಿ ಆರೋಪ ಮಾಡಿದ್ದು, ನಮ್ಮ ಪಾರದರ್ಶಕತೆಯನ್ನು ದಾಖಲಾತಿ ಮೂಲಕ ಹೋರಾಟ ನಡೆಸಿ ನ್ಯಾಯ ದಕ್ಕಿಸಿಕೊಳ್ಳುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೧೪ ರಿಂದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಅಳಮೇಂಗಡ ವಿವೇಕ್, ಉತ್ತಮವಾಗಿ ನಡೆಸುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ ಎಂದರು.
೫೦ ಎಕರೆ ಕಾಫಿ ತೋಟದ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಪ್ರತೀ ಕೆಲಸ ನಿರ್ವಹಣೆ ಮಾಡುವಾಗ ಸಭೆ ನಡೆಸಿ ನಿರ್ಧರಿಸುತ್ತೇವೆ. ಕೊಯ್ಲು ಮಾಡಲು ಕೂಡ ಟೆಂಡರ್ ನಡೆಸಿ ನೀಡಲಾಗುತ್ತದೆ.
ಹಸಿ ಕಾಫಿ ಮತ್ತು ಒಣಗಿದ ಕಾಫಿ ಅನುಪಾತ ಕೂಡ ಸರಿಯಾಗಿರುವುದು ನಮ್ಮ ದಾಖಲೆಯಲ್ಲಿದೆ. ೨೦೨೦-೨೧ ರ ಸಾಲಿನ ಒಟ್ಟು ೧೪೪೭ ಚೀಲ ಕಾಫಿಯನ್ನು ತಲಾ ೫೦೦ ಚೀಲದಂತೆ ೨ ಹಂತಗಳಲ್ಲಿ ಮಾರಾಟ ಮಾಡಲಾಗಿದ್ದು, ಅದರ ಹಣ ಕೂಡ ಖಾತೆಯಲ್ಲಿದೆ. ಉಳಿದ ೪೪೭ ಚೀಲ ಕಾಫಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದು, ಸ್ಪಷ್ಟ ದಾಖಲಾತಿ ಕೂಡ ಕಾಯ್ದಿರಿಸಲಾಗಿದೆ. ಇದರಿಂದ ಯಾವ ರೀತಿಯಲ್ಲೂ ಕಳವು ಮಾಡಿ ಮಾರಾಟ ಮಾಡಲು ಅವಕಾಶವಿಲ್ಲ. ಸದಸ್ಯ ಧನಂಜಯ ತಪ್ಪು ಮಾಹಿತಿ ನೀಡಿಕೊಂಡು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
೨೦೨೪ ರವರೆಗೆ ಜಾಗ ನವೀಕರಿಸಿಕೊಂಡು ಅಭಿವೃದ್ಧಿ ಪಡಿಸುತ್ತಿದ್ದೇವೆ. ಸಂಘವು ವ್ಯವಹಾರಿಕವಾಗಿ ೫೪ ಲಕ್ಷ ಲಾಭದಲ್ಲಿದ್ದು, ಶೇ. ೨೫ ರಷ್ಟು ಡೆವಿಡೆಂಟ್ ಸದಸ್ಯರಿಗೆ ನೀಡಿದ್ದೇವೆ. ಸಭಾಭತ್ಯೆ ೬೦೦ ರೂ. ನೀಡಲಾಗಿದೆ. ಎ ತರಗತಿ ಮಾನ್ಯತೆ ಇದೆ. ಅತ್ಯುತ್ತಮ ಸಂಘ ಎಂಬ ಪ್ರಶಸ್ತಿ ಕೂಡ ರಾಜ್ಯಮಟ್ಟದಲ್ಲಿ ಪಡೆದಿದ್ದೇವೆ. ಲಾಭದಲ್ಲಿರುವ ಸಂಘದಿAದ ೨ ಕಟ್ಟಡ ನಿರ್ಮಿಸಲಾಗಿದೆ ಎಂದು ಸಮರ್ಥಿಸಿದರು. ಗೋಷ್ಠಿಯಲ್ಲಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಕುಂಞÂಮಾಡ ಸಿ. ಮುದ್ದಪ್ಪ, ನಿರ್ದೇಶಕರಾದ ಕೇಚಮಾಡ ನಿರ್ಮಲಾ ದಿನೇಶ್, ಅಶ್ವಿನಿ ನಂದ, ಎಂ. ಕೆ. ಪ್ರಕಾಶ್ ಇದ್ದರು.