ನಾಪೋಕ್ಲು, ಅ. ೨೪: ಒಂದೆಡೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಮತ್ತೊಂದೆಡೆ ದುಪ್ಪಟ್ಟಾದ ವಾಹನ ಬಿಡಿ ಭಾಗಗಳ ದರ. ಇದರ ನಡುವೆ ಗುಂಡಿಮಯ ರಸ್ತೆಗಳಲ್ಲಿ ವಾಹನ ಓಡಿಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ವಾಹನ ಮಾಲಿಕರ ಮತ್ತು ಚಾಲಕರ ಜೀವನ ಶೋಚನೀಯ.

ಗುಂಡಿ ರಸ್ತೆಗಳಲ್ಲಿ ವಾಹನ ಓಡಿಸುವ ಸಂದರ್ಭ ಅಲ್ಪ ಎಚ್ಚರ ತಪ್ಪಿದರೂ ವಾಹನವನ್ನು ವರ್ಕ್ಶಾಪ್‌ಗೆ ಕೊಂಡೊಯ್ಯುವ ಪರಿಸ್ಥಿತಿ. ಇದಕ್ಕೆ ಉದಾಹರಣೆ ನಾಪೋಕ್ಲುವಿನಿಂದ ಪಾರಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ. ಬೇತು ಗ್ರಾಮದಿಂದ ಬಾವಲಿ ಗ್ರಾಮದವರೆಗೆ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ.

ನಾಪೋಕ್ಲು - ಕಡಂಗ ರಸ್ತೆ ದುರಸ್ತಿಯ ಸಂದರ್ಭ ಪಾರಾಣೆ ಜಂಕ್ಷನ್‌ವರೆಗೆ ಮಾತ್ರ ಕಾಮಗಾರಿ ನಡೆಸಲಾಗಿದೆ. ಉಳಿದ ರಸ್ತೆಯ ಕಾಮಗಾರಿ ನಡೆಸಲು ರಸ್ತೆ ಅಗಲೀಕರಣ ಮಾತ್ರ ನಡೆಸಿ ಹಾಗೆಯೇ ಉಳಿಸಲಾಗಿದೆ. ಇದರಿಂದ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಲು ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಇದೇ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಮಳೆ ನೀರು ನಿಂತರೆ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದೆ ಹಲವಾರು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ.

ಸಂಬAಧಿಸಿದವರು ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಈ ವ್ಯಾಪ್ತಿಯ ಸಾರ್ವಜನಿಕರು ಮನವಿ ಮಾಡಿದ್ದಾರೆ.

- ಪಿ.ವಿ. ಪ್ರಭಾಕರ್