ಸೋಮವಾರಪೇಟೆ, ಅ.೨೫: ನಿನ್ನೆ ನಡೆದ ಭಾರತ-ಪಾಕಿಸ್ತಾನ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾಟ ವನ್ನು ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದ ವೇಳೆ, ಕ್ರಿಕೆಟ್ ಪ್ರೇಮಿಯೋರ್ವರು ಹೃದಯಾ ಘಾತಕ್ಕೀಡಾಗಿ ದುರ್ಮರಣ ಹೊಂದಿದ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಮಳ್ತೆ ಗ್ರಾಮದ ಅಣ್ಣಯ್ಯಗೌಡ ಅವರ ಪುತ್ರ ಡಿ.ಎ. ಉದಯ (೫೫) ಎಂಬವರೇ ಸಾವನ್ನಪ್ಪಿದವರು. ನಿನ್ನೆ ದಿನ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಾಟವನ್ನು ತಮ್ಮ ಮನೆಯ ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದ ಸಂದರ್ಭ ೧೦.೪೫ರ ಸುಮಾರಿಗೆ ಹೃದಯಾಘಾತವಾಗಿದೆ.
ಹಿರಿಯ ಕ್ರಿಕೆಟ್ ಆಟಗಾರರೂ ಆಗಿದ್ದ ಉದಯ ಅವರು, ಮನೆ ಮಂದಿಯೊAದಿಗೆ ಪಂದ್ಯಾಟವನ್ನು ವೀಕ್ಷಿಸುತ್ತಿದ್ದರು. ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನ ತಂಡ ಪಂದ್ಯಾಟದಲ್ಲಿ ಮೇಲುಗೈ ಸಾಧಿಸುತ್ತಿದ್ದ ಸಂದರ್ಭ ನಿರಾಸೆ ವ್ಯಕ್ತಪಡಿಸುತ್ತಿದ್ದರು. ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸೋಲು ಖಚಿತ ಎಂಬ ಸನ್ನಿವೇಶ ನಿರ್ಮಾಣವಾಗಿ; ಪಂದ್ಯಾಟ ಮುಗಿಯಲು ಇನ್ನೇನು ಕೆಲ ನಿಮಿಷಗಳು ಇರುವಷ್ಟರಲ್ಲಿಯೇ ಉದಯ ಅವರಿಗೆ ಹೃದಯಾಘಾತವಾಗಿದೆ.
ಪಂದ್ಯ ನೋಡುತ್ತಿದ್ದಂತೆ ಹೃದಯಾ ಘಾತಕ್ಕೀಡಾಗಿ ಕುಸಿದು ಬಿದ್ದ ಉದಯ ಅವರನ್ನು ತಕ್ಷಣ ಮನೆಯವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದರು.
ದೊಡ್ಡಮಳ್ತೆ ಗ್ರಾಮದ ಕಾಫಿ ಬೆಳೆಗಾರರು, ಕ್ರೀಡಾಭಿಮಾನಿಯೂ ಆಗಿದ್ದ ಉದಯ ಅವರು ಪತ್ನಿ ಗಿರಿಜಾ, ಪುತ್ರ ವರ್ಷಿತ್, ಪುತ್ರಿ ಸಿಂಚನಾಳನ್ನು ಅಗಲಿದ್ದಾರೆ.