ಸೋಮವಾರಪೇಟೆ,ಅ.೨೫: ನೆರೆಯ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಜಿಹಾದಿಗಳು ಧಾಳಿ ನಡೆಸಿ, ಅತ್ಯಾಚಾರ, ಹತ್ಯೆಗಳನ್ನು ಮಾಡುತ್ತಿದ್ದು, ಕೂಡಲೆ ಕೇಂದ್ರ ಸರ್ಕಾರ ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ವೇದಿಕೆಯ ಬೋಜೇಗೌಡ, ಪ್ರತಿನಿತ್ಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಕೊಲೆ, ಮಂದಿರಗಳ ಮೇಲೆ ಧಾಳಿ ನಡೆಯುತ್ತಿದೆ. ಕೂಡಲೇ ಕೇಂದ್ರ ಸರ್ಕಾರದ ನಿಯೋಗವನ್ನು ಬಾಂಗ್ಲಾಕ್ಕೆ ಕಳುಹಿಸಿ, ಅಲ್ಲಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ಅಲ್ಲಿನ ಸರ್ಕಾರಕ್ಕೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.

ಹಿಂದೂಗಳ ರಕ್ಷಣೆಗೆ ಹೊಸ ಕಾನೂನು ತರಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸುಭಾಷ್ ತಿಮ್ಮಯ್ಯ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಎಂ.ಬಿ.ಉಮೇಶ್, ತಾಲೂಕು ಅಧ್ಯಕ್ಷ ಸುನಿಲ್, ಪ್ರಮುಖರಾದ ರಂಜನ್, ಗಿರೀಶ್, ಹೇಮಂತ್, ದರ್ಶನ್, ವಿನುಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.