ಮಡಿಕೇರಿ, ಅ. ೨೫: ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಐಪಿಎಲ್ ಮಾದರಿಯ ದ್ವಿತೀಯ ವರ್ಷದ ಪ್ರೆಸ್‌ಕ್ಲಬ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನ.೨೮ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಪ್ರಯುಕ್ತ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪಾಲಿಬೆಟ್ಟ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರೆಸಾರ್ಟ್ನ ವ್ಯವಸ್ಥಾಪಕ ನಿರ್ದೇಶಕ ಜಾನ್ ಥೋಮಸ್ ಉದ್ಘಾಟಿಸಿ ಮಾತನಾಡಿ, ಸಮಾಜದ ಆಗುಹೋಗುಗಳನ್ನು ಪ್ರತಿದಿನ ಗಮನಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗುತ್ತದೆ. ಸಮಾಜದ ದಾರಿದೀಪವಾಗಿರುವ ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಉತ್ತಮ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಕ್ರಿಕೆಟ್ ಪಂದ್ಯಾವಳಿ ಪತ್ರಕರ್ತರ ಜಂಜಾಟ ಮರೆಸುತ್ತದೆ ಎಂದರು.

ವೀರಾಜಪೇಟೆ ತಾ.ಪಂ. ಮಾಜಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ, ಹಿಂದೆ ಜನಾಂಗಗಳನ್ನು ಒಗ್ಗೂಡಿಸಲು ಕ್ರೀಡಾಕೂಟ ನಡೆಸಲಾಗುತ್ತಿತ್ತು. ಈಗ ಮಿತೃತ್ವ ಬೆಳೆಸುವಲ್ಲಿ ಕ್ರೀಡಾಕೂಟಗಳು ಯಶಸ್ವಿಯಾಗುತ್ತಿವೆ. ಪತ್ರಕರ್ತರು ಒತ್ತಡಗಳಿಂದ ಹೊರಬರಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸುಮಾರು ೧೬೪ ಮಂದಿ ಸದಸ್ಯರಿರುವ ೨೩ ವರ್ಷ ಪೂರೈಸಿರುವ ಕೊಡಗು ಪ್ರೆಸ್‌ಕ್ಲಬ್‌ನಿಂದ ಕಳೆದ ಬಾರಿ ಐಪಿಎಲ್ ಮಾದರಿಯ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಬಾರಿ ೨ನೇ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಕ್ರಿಕೆಟ್ ಕೇವಲ ಕ್ರೀಡಾಕೂಟವಾಗಿ ಉಳಿದಿಲ್ಲ. ಬದಲಾಗಿ ಎಲ್ಲರೂ ಒಂದೆಡೆ ಬೆಸುಗೆಯಾಗಲು ಸಹಕಾರಿಯಾಗಲಿದೆ ಎಂದರು.

ಒಟ್ಟು ೯೯ ಮಂದಿ ಆಟಗಾರರು ಬಿಡ್ಡಿಂಗ್‌ಗೆ ಹೆಸರು ನೋಂದಾಯಿಸಿ ಕೊಂಡಿದ್ದರು. ಹೇಮಂತ್, ಪ್ರಭುದೇವ್ ಹಾಗೂ ರೆಜಿತ್‌ಕುಮಾರ್ ತಂಡ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿಕೊಟ್ಟರು.

೮ ತಂಡಗಳು: ಪಂದ್ಯಾವಳಿಯಲ್ಲಿ ೮ ತಂಡಗಳು ಸೆಣಸಾಡಲಿದೆ. ವಿನು ಕುಶಾಲಪ್ಪ ನಾಯಕತ್ವ, ಬೊಳ್ಳಜಿರ ಅಯ್ಯಪ್ಪ ಮಾಲೀಕತ್ವದ ‘ನಾಡಪೆದಾ ಆಶಾ’ ತಂಡ, ಆದರ್ಶ ನಾಯಕತ್ವ, ನವೀನ್ ಮಾಲೀಕತ್ವದ ಕೊಡಗು ಲೈಟ್ ೨೪ ತಂಡ, ಮುಸ್ತಾಫ ನಾಯಕತ್ವ, ಪುತ್ತಂ ಪ್ರದೀಪ್ ಮಾಲೀಕತ್ವದ ಕ್ಯಾಪ್ಟನ್ ೧೨ ತಂಡ, ಶಿವರಾಜ್ ನಾಯಕತ್ವದ ಜಯಪ್ರಕಾಶ್ ಮಾಲೀಕತ್ವದ ಕುಶಾಲನಗರ ಸೆನ್ಸಾ ತಂಡ, ಮುರುಳೀಧರ್ ನಾಯಕತ್ವದ ಲೋಕೇಶ್ ಸಾಗರ್ ನಾಯಕತ್ವದ ಕಾವೇರಿ ಮಕ್ಕಳು, ಎನ್.ಎನ್. ದಿನೇಶ್ ನಾಯಕತ್ವದ, ಕಿಶೋರ್ ನಾಚಪ್ಪ ಮಾಲೀಕತ್ವದ ಗೋಣಿಕೊಪ್ಪ ಮೀಡಿಯಾ ಕಿಂಗ್ಸ್, ಮಂಜು ಸುವರ್ಣ ನಾಯಕತ್ವ, ಪ್ರೇಮ್ ಮಾಲೀಕತ್ವದ ಚಿತ್ತಾರ ಲಯನ್ ಅಜ್ಜಮಾಡ ರಮೇಶ್ ಕುಟ್ಟಪ್ಪ ನಾಯಕತ್ವದ, ಶರ್ಪುದ್ದೀನ್ ಮಾಲೀಕತ್ವದ ಟೀಂ ಇಂಡಿಯಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ರೆಸಾರ್ಟ್ ನಿರ್ದೇಶಕ ರಾಯ್ ಥೋಮಸ್, ಬಿಡ್ಡಿಂಗ್ ಪ್ರಕ್ರಿಯೆ ಸಂಚಾಲಕ ಪುತ್ತಂಪ್ರದೀಪ್ ಮತ್ತಿತರರು ಇದ್ದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ತೇಜಸ್ ಪಾಪಯ್ಯ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ನಿರೂಪಿಸಿ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ ವಂದಿಸಿದರು.