ಮಡಿಕೇರಿ, ಅ. ೨೪: ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದ ಕೊಡವ ಹೆರಿಟೇಜ್ ಯೋಜನೆ ಹಲವು ವರ್ಷಗಳೂ ಕಳೆದರೂ ಪೂರ್ಣಗೊಳ್ಳುವ ರೀತಿ ಕಾಣುತ್ತಿಲ್ಲ. ಈ ನಡುವೆ ಹೆರಿಟೇಜ್ ನಿರ್ಮಾಣದಲ್ಲಿ ಕೆಲ ಅಧಿಕಾರಗಳು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಗುತ್ತಿಗೆದಾರನ ವಿರುದ್ಧವೂ ಕ್ರಮಕ್ಕೆ ಸರಕಾರ ಮುಂದಾಗಿದೆ.
ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಈ ಬಗ್ಗೆ ಅಧಿಕಾರಿಗಳಿಗೆ ಗುರುವಾರ ಬೆಂಗಳೂರಿನಲ್ಲಿ ನಡೆದ ‘ಪಿಟಿಷನ್ ಕಮಿಟಿ’ ಸಭೆಯಲ್ಲಿ ಸೂಚನೆ ನೀಡಿದ್ದು, ತನಿಖೆ ನಡೆಸಿ ಆರೋಪ ಸಾಬೀತಾದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದಲೇ ಹಣವನ್ನು ವಸೂಲಿ ಮಾಡಲು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂಬ ಮಾಹಿತಿ ‘ಶಕ್ತಿ’ಗೆ ಲಭ್ಯವಾಗಿದೆ.
(ಮೊದಲ ಪುಟದಿಂದ) ೨೦೦೯-೧೦ರಲ್ಲಿ ಕೊಡವ ಐನ್‌ಮನೆ ಮಾದರಿಯಲ್ಲಿ ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ ೪ ಎಕರೆ ಪ್ರದೇಶದಲ್ಲಿ ಕೊಡವ ಹೆರಿಟೇಜ್ ನಿರ್ಮಾಣಕ್ಕೆ ಯೋಜನೆ ರೂಪಿಸಿ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿತ್ತು.
ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು, ಪದ್ಧತಿ, ಪರಂಪರೆ, ಆಚಾರ-ವಿಚಾರ, ಬೆಳೆ ಹಾಗೂ ಪುರಾತನ ವಸ್ತುಗಳ ಪ್ರದರ್ಶನ ಇನ್ನಿತರ ವ್ಯವಸ್ಥೆಗಳನ್ನು ಇಲ್ಲಿ ಮಾಡಲು ಚಿಂತಿಸಲಾಗಿತ್ತು. ೨೦೧೧ರಲ್ಲಿ ಕಾಮಗಾರಿ ಚಾಲನೆ ನೀಡಲಾಯಿತು. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮೂಲಕ ಲೋಕೋಪಯೋಗಿ ಇಲಾಖೆ ರೂ ೨.೬೮ ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು. ಆದರೆ, ಕಾಮಗಾರಿ ಕಳಪೆ ಹಾಗೂ ಮಂದಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಇಂದಿಗೂ ಕಟ್ಟಡ ಮೇಲೇಳಲಿಲ್ಲ. ಈ ಸಂಬAಧ ಮಡಿಕೇರಿ ಶಾಸಕ ರಂಜನ್ ದಿಟ್ಟ ನಡೆ ಅನುಸರಿಸುತ್ತಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಅವ್ಯವಹಾರ ಆರೋಪ
ಹೆರಿಟೇಜ್ ನಿರ್ಮಾಣ ಕಾರ್ಯದಲ್ಲಿ ಅವ್ಯವಹಾರ ನಡೆದಿದೆ. ಅದಲ್ಲದೆ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ಗಂಭೀರ ಆರೋಪವನ್ನು ಅಪ್ಪಚ್ಚು ರಂಜನ್ ಮಾಡಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಹೆರಿಟೇಜ್ ನಿರ್ಮಾಣಕ್ಕೆಂದು ಠೇವಣಿ ಇರಿಸಿದ್ದ ಹಣದ ದುರುಪಯೋಗವಾಗಿದೆ. ಅದಲ್ಲದೆ ಹೆಚ್ಚುವರಿ ಹಣವನ್ನು ಗಮನಕ್ಕೆ ತಾರದೆ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದ್ದು, ಆರೋಪ ಸಾಬೀತಾದಲ್ಲಿ ಅವರಿಂದಲೇ ಹಣವನ್ನು ವಸೂಲಿ ಮಾಡಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗುತ್ತಿಗೆದಾರನ ವಿರುದ್ಧ ತನಿಖೆಯ ಜವಾಬ್ದಾರಿಯನ್ನು ಮೈಸೂರು ಜಿಲ್ಲಾಧಿಕಾರಿಗೆ ನೀಡಲಾಗುತ್ತಿದೆ. ಕೊಡಗು ಜಿಲ್ಲಾಧಿಕಾರಿ ಅಧಿಕಾರಿಗಳ ತನಿಖೆ ನಡೆಸಲಿದ್ದಾರೆ. ಹೆರಿಟೇಜ್ ಅವ್ಯವಹಾರಕ್ಕೆ ಸಂಬAಧಿಸಿದAತೆ ನಿವೃತ್ತಗೊಂಡಿರುವ ಓರ್ವ ಅಧಿಕಾರಿ ಸೇರಿದಂತೆ ೫-೬ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಹಾಕಿದ ಹಿನ್ನೆಲೆ ಆತ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು, ಇದೀಗ ಅದು ರದ್ದಾಗಿದೆ ಎಂದು ತಿಳಿಸಿದ್ದಾರೆ.
- ಹೆಚ್.ಜೆ. ರಾಕೇಶ್