ಮಡಿಕೇರಿ, ಅ. ೨೨: ನರಿಯಂದಡ ಗ್ರಾಮದ ಚೆಯ್ಯಂಡಾಣೆ, ಬಾವಲಿ, ಪಾರಾಣೆ, ಮೂರ್ನಾಡು ಸೇರುವ ರಸ್ತೆಯನ್ನು ದುರಸ್ತಿಪಡಿಸದಿದ್ದಲ್ಲಿ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬಿಳಿಯಂಡ್ರ ಹರಿಪ್ರಸಾದ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಯ್ಯಂಡಾಣೆ, ಬಾವಲಿ, ಪಾರಾಣೆ, ಮೂರ್ನಾಡು ಸೇರುವ ರಸ್ತೆಯು ಕಳೆದ ೧೦ ವರ್ಷಗಳಿಂದ ಹಾಳಾಗಿದ್ದು, ಇದುವರೆಗೂ ದುರಸ್ತಿಯಾಗಿಲ್ಲ. ಆದ್ದರಿಂದ ಕೂಡಲೇ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನರಿಯಂದಡ ಗ್ರಾಮಸ್ಥರು ಬಹಿಷ್ಕರಿಸಲಿದ್ದಾರೆ ಎಂದು ತಿಳಿಸಿದರು. ನರಿಯಂದಡ ಅಯ್ಯಪ್ಪ ದೇವಾಲಯದ ಸಮೀಪ ಟ್ರಾನ್ಸ್ಫಾರ್ಮರ್ವೊಂದು ಹಾಳಾಗಿದ್ದು, ಈ ಬಗ್ಗೆ ಸೆಸ್ಕ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಛಾಯಾ ಪ್ರಕಾಶ್ ಮಂಞಪುರ, ಸದಸ್ಯರಾದ ಪವನ್ ತೋಟಂಬೈಲು, ತ್ರಿಶೂಲ್ ತೋಟಂಬೈಲು, ಪೊಕ್ಕುಳಂಡ್ರ ರಕ್ಷಿತ್, ಅಯ್ಯಪ್ಪ ಸ್ವಸಹಾಯ ಸಂಘದ ಅಧ್ಯಕ್ಷ ಸೂರಜ್ ಉಪಸ್ಥಿತರಿದ್ದರು.