ಗೋಣಿಕೊಪ್ಪಲು, ಅ. ೨೩: ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳ ಧ್ವಂಸ, ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಯುವ ಬ್ರಿಗೇಡ್‌ನ ಸಂಚಾಲಕ ನವೀನ್ ಮುಂದಾಳತ್ವದಲ್ಲಿ ಗೋಣಿಕೊಪ್ಪದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಸಂಜೆಯ ೬.೩೦ರ ವೇಳೆ ನಗರದ ಕೆನರಾ ಬ್ಯಾಂಕ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ನಂತರ ಸಮೀಪದ ಬಸ್ ನಿಲ್ದಾಣಕ್ಕೆ ಆಗಮಿಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಂಘ ಪರಿವಾರದ ಸರ ಸಂಚಾಲಕ ಚಕ್ಕೆರ ಮನು ಖಂಡಿಸಿದರು. ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ ದೌರ್ಜನ್ಯಗಳು ಎಲ್ಲೆ ಮೀರುತ್ತಿವೆ. ಭಾರತದಿಂದ ಹಲವು ರೀತಿಯ ಸಹಕಾರ ಪಡೆದಿರುವ ಬಾಂಗ್ಲಾ ಸರಕಾರ ಮತಾಂಧರ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದ್ದು, ನೀಚ ಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ ಎಂದರು.

ಬಾAಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಅಲ್ಲಿನ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆಯಿದೆ. ಬಾಂಗ್ಲಾದೇಶ ದಲ್ಲಿನ ಬಹುಸಂಖ್ಯಾತರು ಅಲ್ಲಿನ ಹಿಂದೂಗಳನ್ನು ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ, ಬಿಜೆಪಿ ಪಕ್ಷದ ಮುಖಂಡರಾದ ಕಾಡ್ಯಮಾಡ ಗಿರೀಶ್ ಗಣಪತಿ, ಗುಮ್ಮಟ್ಟೀರ ಕಿಲನ್ ಗಣಪತಿ, ಗುಮ್ಮಟೀರ ದರ್ಶನ್, ಕೆ. ರಾಜೇಶ್, ಸುರೇಶ್‌ರೈ, ಚೈತ್ರ, ಬಿ.ಎನ್. ಪ್ರಕಾಶ್, ಪುಷ್ಪ, ಗೀತಾ, ರಾಮಕೃಷ್ಣ, ಚೇತನ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ವಕ್ತಾರ ಅಜಿತ್ ಕರುಂಬಯ್ಯ ವಂದಿಸಿದರು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.