ಕೂಡಿಗೆ/ ಸಿದ್ದಾಪುರ, ಅ. ೨೩: ಕೂಡಿಗೆ ಸಮೀಪದ ಯಡವನಾಡು ಹಾಗೂ ಮಾಲ್ದಾರೆ ಸಮೀಪದ ಗದ್ದಿಗೆಬೆಟ್ಟದಲ್ಲಿ ಪ್ರತ್ಯೇಕ ಕಾಡಾನೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಇಬ್ಬರು ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಡವನಾಡು ಬಳಿ ವೆಂಕಟೇಶ, ಮಾಲ್ದಾರೆ ಸಮೀಪ ವಸಂತ್ ಓಡಿ ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಆದರೆ, ಇಬ್ಬರ ವಾಹನಗಳು ಆನೆಯ ರೋಷಾವೇಶಕ್ಕೆ ನಜ್ಜುಗುಜ್ಜಾಗಿದೆ.
ಸೋಮವಾರಪೇಟೆಯಿಂದ ಕೂಡಿಗೆಗೆ ಬೈಕ್‌ನಲ್ಲಿ ಬರುವ ಸಂದರ್ಭ ಯಡವನಾಡು ಬಸವಣ್ಣ ದೇವಾಲಯದ ತಿರುವಿನಲ್ಲಿ ಒಂಟಿ ಸಲಗವೊಂದು ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಕೂಡಿಗೆ ಕ್ರೀಡಾ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ಅವರ ಮೇಲೆ ಸಲಗ ದಾಳಿ ನಡೆಸಿದ್ದು, ಅವರ ಮುಖ ಮತ್ತು ಕೈ ಭಾಗಕ್ಕೆ ಕಾಡಾನೆ ಕೊರೆಗಳು ತಿವಿದ ಪರಿಣಾಮವಾಗಿ ಮುಖ ಮತ್ತು ಕೈ ಭಾಗಕ್ಕೆ ಗಾಯವಾಗಿದೆ. ಸಲಗ ಎದುರಾಗಿ ಬೈಕ್ ಬಿದ್ದ ತಕ್ಷಣವೇ ಓಡಿ ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಕಾಡಾನೆ ಬೈಕ್ ಅನ್ನು ತುಳಿದು ಮರೆಯಾಗಿದೆ. ಘಟನೆ ನಡೆದ ಸ್ಧಳದಿಂದ ವೆಂಕಟೇಶ ಓಡಿಹೋಗಿ ಕ್ರೀಡಾ ಶಾಲೆಯ ಸಹ ತರಬೇತುದಾರರಿಗೆ ದೂರವಾಣಿ ಮಾಡಿದ ತಕ್ಷಣವೇ ಕೂಡಿಗೆಯಿಂದ ಘಟನೆ ನಡೆದ ಸ್ಥಳಕ್ಕೆ ಹೋಗಿ ವೆಂಕಟೇಶ ಅವರನ್ನು ಕರೆದುಕೊಂಡು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆ ವಿಚಾರ ತಿಳಿದ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಕ್ರೀಡಾ ಶಾಲೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಆ ಸಂದರ್ಭದಲ್ಲಿ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಮನು, ಸತೀಶ್, ಅರಣ್ಯ ರಕ್ಷಕರಾದ ರಾಜಪ್ಪ, ಪ್ರಸಾದ್ ಇದ್ದರು.
ಕಾಡಾನೆಯೊಂದು ಕಾರಿನ ಮೇಲೆ ರಾತ್ರಿ ದಾಳಿ ನಡೆಸಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟದಲ್ಲಿ ತಾ.೨೨ರ ರಾತ್ರಿ ನಡೆದಿದೆ. ಚೆನ್ನಂಗಿ ಗೂಡ್ಲೂರು ಗ್ರಾಮದ ನಿವಾಸಿಯಾಗಿರುವ ಮುಕ್ಕಾಟಿ ವಸಂತ್ ಎಂಬವರು ಕೆಲಸ ನಿಮಿತ್ತ ಪಿರಿಯಾಪಟ್ಟಣಕ್ಕೆ ಹೋಗಿ ತನ್ನ ಕಾರಿನಲ್ಲಿ ರಾತ್ರಿ ಮನೆಗೆ ಮಾಲ್ದಾರೆಯ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಮಾಲ್ದಾರೆಯ ಗದ್ದಿಗೆ ಬೆಟ್ಟದಲ್ಲಿ ಕಾಡಾನೆಯೊಂದು ಹಠಾತ್ತನೆ ಎದುರಾಗಿದೆ. ಈ ಸಂದರ್ಭದಲ್ಲಿ ಕಾರಿನ ಮೇಲೆ ದಾಳಿ ನಡೆಸಿದೆ. ಅಲ್ಲದೆ ರೋಷಗೊಂಡ ಕಾಡಾನೆಯು ಕಾರಿನ ಮುಂಭಾಗದ ಬೋನೆಟ್‌ಗೆ ಕಾಲು ಇಟ್ಟು ತುಳಿದು ಜಖಂಗೊಳಿಸಿದೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಿAದ ವಸಂತ್ ಪಾರಾಗಿದ್ದಾರೆ.
ಕಾಡಾನೆ ದಾಳಿಯಿಂದಾಗಿ ಕಾರು ಜಖಂಗೊAಡಿದ್ದು, ವಸಂತ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಿಢೀರನೆ ಕಾಡಾನೆ ದಾಳಿಗೆ ಸಿಲುಕಿದ ವಸಂತ ಭಯಗೊಂಡು ಬಳಿಕ ತಮ್ಮ ಪುತ್ರರಿಗೆ ಕರೆಮಾಡಿ, ಬರಹೇಳಿದರು. ವಸಂತ್ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಮಾಲ್ದಾರೆ ಸುತ್ತಮುತ್ತಲ ಭಾಗದಲ್ಲಿ ಕಾಡಾನೆಗಳ ಹಾವಳಿ ಸೇರಿದಂತೆ ಹುಲಿಯ ಓಡಾಟವಿದ್ದರೂ ಕೂಡ ಅರಣ್ಯ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲವೆಂದು ವಸಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.