ಮಡಿಕೇರಿ, ಅ. ೨೧: ಕೊಡಗರಹಳ್ಳಿಯಿಂದ ಕಂಬಿಬಾಣೆ ಮಾರ್ಗವಾಗಿ ಚಿಕ್ಲಿಹೊಳೆಗೆ ಹಾದು ಹೋಗುವ ರಸ್ತೆ ದುರಸ್ತಿಗೆ ಒತ್ತಾಯಿಸಿ ತಾ. ೨೩ ರಿಂದ ಕಂಬಿಬಾಣೆಯಲ್ಲಿ ಅನಿರ್ದಿಷ್ಟಾವಧಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಕಂಬಿಬಾಣೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ, ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ಲಾ ಕುಟ್ಟಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಕೊಡಗರಹಳ್ಳಿ ಯಿಂದ ಕಂಬಿಬಾಣೆ ಮಾರ್ಗವಾಗಿ ಚಿಕ್ಲಿಹೊಳೆಗೆ ಹಾದು ಹೋಗುವ ರಸ್ತೆಯು ಕಾವೇರಿ ನೀರಾವರಿ ನಿಗಮದ ಅಧೀನದಲ್ಲಿದೆ. ಈ ಗ್ರಾಮಗಳಲ್ಲಿ ಕೂಲಿಕಾರ್ಮಿಕರೆ ಅಧಿಕವಾಗಿದ್ದು, ರಸ್ತೆ ತೀರಾ ಹದಗೆಟ್ಟಿರುವುದರಿಂದ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಗರ್ಭಿಣಿ ಸ್ತಿçÃಯೊಬ್ಬರು ರಸ್ತೆ ದುರವಸ್ಥೆಯಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೆ ದಾರಿ ಮಧ್ಯದಲ್ಲಿಯೇ ಹೆರಿಗೆಯಾದ ಘಟನೆಯೂ ನಡೆದಿದೆ.
ಈ ನಡುವೆ ಗುಡ್ಡೆಹೊಸೂರು ರಂಗಸಮುದ್ರ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅದಕ್ಕೆ ಬದಲಿ ರಸ್ತೆಯಾಗಿ ಕೊಡಗರಹಳ್ಳಿ ಚಿಕ್ಲಿಹೊಳೆಯ ಹದಗೆಟ್ಟ ರಸ್ತೆಯನ್ನು ಗುರುತಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ನಡೆದಾಡಲೂ ಕೂಡ ಸಾಧ್ಯವಾಗದಂತಹ ಸ್ಥಿತಿ ಇದೆ ಎಂದು ತಿಳಿಸಿದರು. ಈ ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನ ದೊರೆತಿಲ್ಲ. ಆದ್ದರಿಂದ ತಾ. ೨೩ ರಿಂದ ರಸ್ತೆ ತಡೆ ಹಮ್ಮಿಕೊಂಡಿದ್ದು, ಇದಕ್ಕೂ ಸ್ಪಂದನ ದೊರೆಯದಿದ್ದಲ್ಲಿ, ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಲಾಗುವುದಲ್ಲದೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದೆಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಓಬಿಸಿ ಘಟಕದ ಸದಸ್ಯ ವಿನೀಶ್, ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಪೂರ್ಣಿಮಾ, ೭ನೇ ಹೊಸಕೋಟೆ ಪಂಚಾಯಿತಿ ಸದಸ್ಯೆ ಚಂದ್ರಾವತಿ, ಸುಭಾಷ್ ಯುವಕ ಸಂಘದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.