ಮಡಿಕೇರಿ, ಅ. ೨೧: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. ೨೫ರಂದು ಬೆಳಿಗ್ಗೆ ೧೦ ಗಂಟೆಗೆ ಚೆಟ್ಟಳ್ಳಿಯ ನರೇಂದ್ರ ಮೋದಿ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ೨೦೨೦-೨೧ನೇ ಸಾಲಿನ ತಾ. ೩೧.೦೩.೨೦೨೧ಕ್ಕೆ ಒಟ್ಟು ಎ ತರಗತಿಯ ೧೧೮೭ ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳ ಒಟ್ಟು ರೂ. ೧೨೨.೩೦ ಲಕ್ಷಗಳಿದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ. ೨೨೦.೧೧ ಲಕ್ಷಗಳು ಹಾಗೂ ನಿರಖು ಠೇವಣಿ, ಸಂಚಯ ಠೇವಣಿ ಹಾಗೂ ಇತರ ಠೇವಣಿ ಸೇರಿ ಒಟ್ಟು ರೂ. ೧೧೦೨.೨೮ ಲಕ್ಷಗಳಿರುತ್ತದೆ. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಮತ್ತು ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ. ೩೩೭.೪೭ ಲಕ್ಷಗಳನ್ನು ಠೇವಣಿ ಮಾಡಲಾಗಿದೆ ಎಂದರು.
ಸAಘವು ೨೦೨೦-೨೧ನೇ ಸಾಲಿಗೆ ಕೆಸಿಸಿ ಫಸಲು ಸಾಲ ಸೇರಿ ೧೭೦೭.೮೦ ಲಕ್ಷಗಳಷ್ಟು ಸಾಲವನ್ನು ವಿತರಿಸಿದೆ. ಸಂಘವು ಎಂ.ಸಿ.ಎಫ್. ಮದ್ರಾಸ್ ಫರ್ಟಿಲೈರ್ಸ್, ಇಂಡಿಯನ್ ಪೊಟ್ಯಾಷ್ ಇಫ್ಕೊ, ಫ್ಯಾಕ್ಟ್, ಪ್ಯೂಚರ್ ಫರ್ಟಿಲೈರ್ಸ್, ಜುವಾರಿ, ಕೋರಮಂಡಲ್ ಸಂಸ್ಥೆಗಳ ಸಗಟು ಲೈಸನ್ಸ್ ಹೊಂದಿದ್ದು ನೇರವಾಗಿ ರಸಗೊಬ್ಬರ ಖರೀದಿಸಿ ಮಾರಾಟ ಮಾಡುತ್ತಿದ್ದು ೨೦೨೦-೨೧ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಾಮಗ್ರಿ ಬಾಪ್ತು ರೂ. ೪೯೫.೮೬ ಲಕ್ಷಗಳ ವಹಿವಾಟು ನಡೆಸಿ ರೂ. ೨೨.೩೬ ಲಕ್ಷಗಳ ವ್ಯಾಪಾರ ಲಾಭಗಳಿಸಿದೆ.
ಸಂಘವು ೨೦೨೦-೨೧ನೇ ಸಾಲಿನಲ್ಲಿ ಒಟ್ಟು ರೂ. ೧೦೪೮೩.೭೬ ಲಕ್ಷಗಳ ವಹಿವಾಟು ನಡೆಸಿದ್ದು ನಿವ್ವಳ ಲಾಭವಾಗಿ ರೂ. ೩೬.೫೦ ಲಕ್ಷಗಳಿಸಿದೆ ಎಂದು ತಿಳಿಸಿದರು. ಸಂಘದ ಮುಖ್ಯ ಕಚೇರಿಯ ಮೇಲ್ಭಾಗದಲ್ಲಿ ರೂ. ೯೪ ಲಕ್ಷ ವೆಚ್ಚದಲ್ಲಿ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದು ಅಂಗಡಿ ಮಳಿಗೆ ಬಾಡಿಗೆಗೆ ನೀಡಲಾಗಿದೆ ಹಾಗೂ ಅತಿಥಿ ಗೃಹವನ್ನು ಬಾಡಿಗೆಗೆ ನೀಡಲಾಗುತ್ತಿದೆ. ಸಂಘದ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು ರೂ. ೫ಕ್ಕೆ ೨೦ ಲೀ. ನೀರನ್ನು ನೀಡಲಾಗುತ್ತಿದೆ. ಸಂಘದ ನರೇಂದ್ರ ಮೋದಿ ಸಮುದಾಯ ಭವನವನ್ನು ಮದುವೆ ಹಾಗೂ ಮತ್ತಿತರ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದು ಸಂಘದ ವತಿಯಿಂದ ಕಾಫಿ ಔಟರ್ನ್ ಹಾಗೂ ಮಾಯಿಸ್ಚರೈ ಸರ್ ಪರೀಕ್ಷೆ ಮಾಡಿಕೊಡಲಾಗುತ್ತಿದೆ. ೨೦೨೧ನೇ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ. ೧೫ರಂತೆ ಡಿವಿಡೆಂಡ್ ನೀಡಲು ತೀರ್ಮಾನಿಸಿದ್ದು, ಮಹಾಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು. ತಾ ೨೫ರ ಮಹಾಸಭೆಯಲ್ಲಿ ಮಣ್ಣು ಪರೀಕ್ಷಾ ಕೇಂದ್ರವೂ ಶುಭಾರಂಭಗೊಳ್ಳಲಿದೆ ಎಂದು ಮಣಿ ಉತ್ತಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಪರಿಣಿತ ನಿರ್ದೇಶಕ ಅಡಿಕೇರ ಈ ಮುತ್ತಪ್ಪ, ನಿರ್ದೇಶಕರುಗಳಾದ ಮರದಾಳು ಎಸ್. ಉಲಾಸ, ಪುತ್ತರಿರ ಶಿವು ನಂಜಪ್ಪ, ಟಿ.ಎಸ್. ಧನಂಜಯ ಉಪಸ್ಥಿತರಿದ್ದರು.