ದೇಶದಲ್ಲಿ ೧೦೦ ಕೋಟಿ ಲಸಿಕೆ ವಿತರಣೆ
ನವದೆಹಲಿ, ಅ. ೨೧: ಕೋವಿಡ್-೧೯ ಪಿಡುಗಿನ ವಿರುದ್ಧ ದೇಶಾದ್ಯಂತ ಆರಂಭವಾದ ಲಸಿಕಾ ಅಭಿಯಾನದಡಿ ಗುರುವಾರ ೧೦೦ ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಮಹತ್ವದ ಮೈಲುಗಲ್ಲಿನ ಸಾಧನೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ, ಈ ಸಾಧನೆ ಮಾಡಿರುವುದಕ್ಕೆ ದೇಶವನ್ನು ಅಭಿನಂದಿಸಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದ ಫಲವಾಗಿದೆ ಎಂದಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ದೇಶದ ಶೇ. ೭೫ ರಷ್ಟು ವಯಸ್ಕರು ಮೊದಲ ಡೋಸ್ ಪಡೆದಿದ್ದರೆ, ಶೇ. ೩೫ ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ೮೫ ದಿನಗಳಲ್ಲಿ ೧೦ ಕೋಟಿ ಡೋಸ್ ಲಸಿಕೆ ನೀಡಿದ್ದ ದೇಶದಲ್ಲಿ ೪೫ ದಿನಗಳಲ್ಲಿ ೨೦ ಕೋಟಿಗೂ ಅಧಿಕ ಮತ್ತು ೨೯ ದಿನಗಳಲ್ಲಿ ೩೦ ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ೨೪ ದಿನಗಳಲ್ಲಿ ೩೦ ರಿಂದ ೪೦ ಕೋಟಿ, ತದನಂತರದ ೨೦ ದಿನಗಳಲ್ಲಿ ಆಗಸ್ಟ್ ೬ ರಂದು ೫೦ ಕೋಟಿ ಡೋಸ್ ಲಸಿಕೆ ನೀಡಿಕೆಯ ಸಾಧನೆ ಮಾಡಲಾಗಿತ್ತು ಎಂದು ತಿಳಿಸಿದೆ. ತದನಂತರ ೭೬ ದಿನಗಳಲ್ಲಿ ೧೦೦ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟç, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಡೋಸ್ ನೀಡಲಾಗಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದರೊಂದಿಗೆ ಜನವರಿ ೧೬ ರಿಂದ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಫೆಬ್ರವರಿ ೨ ರಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ಮಾರ್ಚ್ ೧ ರಿಂದ ೬೦ ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ೪೫ ವರ್ಷಕ್ಕೂ ಮೇಲ್ಪಟ್ಟ ದುರ್ಬಲ ವರ್ಗದವರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು. ಏಪ್ರಿಲ್ ೧ ರಿಂದ ೪೫ ವರ್ಷದೊಳಗಿನ ಎಲ್ಲಾ ಜನರಿಗೂ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಾರಂಭವಾಗಿತ್ತು. ಮೇ ೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೂ ಲಸಿಕೆ ನೀಡುವಿಕೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ
ನವದೆಹಲಿ, ಅ. ೨೧: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಶೇ. ೩ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ. ೩ರಷ್ಟು ತುಟ್ಟಿಭತ್ಯೆ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಈ ಹೊಸ ಪ್ರಸ್ತಾವವೂ ಅನುಷ್ಠಾನಕ್ಕೆ ಬಂದ ನಂತರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಶೇ. ೩೧ಕ್ಕೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ೪೭.೧೪ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೮.೬೨ ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಕೇಂದ್ರ ಕ್ಯಾಬಿನೆಟ್ ಗುರುವಾರ ತುಟ್ಟಿಭತ್ಯೆ ಮತ್ತು ಅನ್ಯಾಯ ಪರಿಹಾರವನ್ನು ಶೇ. ೩ ರಿಂದ ೩೧ಕ್ಕೆ ಹೆಚ್ಚಿಸಿದೆ ಎಂದು ಹೇಳಿದರು. ಅಂತೆಯೇ ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಖಜಾನೆಯ ಮೇಲೆ ವಾರ್ಷಿಕ ರೂ. ೯,೪೮೮ ಕೋಟಿ ಹೊರೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಬಲವಾದ ರಕ್ಷಾಕವಚ ದೊರೆತಿದೆ : ಪ್ರಧಾನಿ
ನವದೆಹಲಿ, ಅ. ೨೧: ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಬಲವಾದ ರಕ್ಷಾಕವಚ ದೊರೆತಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ. ಕೋವಿಡ್ ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಮಹತ್ವದ ಸಾಧನೆ ಮಾಡಿದ್ದು, ಈ ವರೆಗೂ ದೇಶದಲ್ಲಿ ವಿತರಣೆಯಾದ ಕೋವಿಡ್ ಲಸಿಕೆಗಳ ಪ್ರಮಾಣ ೧೦೦ ಕೋಟಿ ದಾಟಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲಿದ್ದ ಸಿಬ್ಬಂದಿಗಳನ್ನು ಅಭಿನಂದಿಸಿದರು. ಅಲ್ಲದೆ ಆರೋಗ್ಯ ಕಾರ್ಯಕರ್ತರಿಗೆ ಶುಭ ಕೋರಿದರು.
ತೈಲ ದರ ಏರಿಕೆಯಿಂದ ಜಾಗತಿಕ ಆರ್ಥಿಕ ಪ್ರಗತಿ ಕುಂಠಿತ
ನವದೆಹಲಿ, ಅ ೨೧: ವಿಶ್ವದ ಮೂರನೇ ಅತಿ ದೊಡ್ಡ ಇಂಧನ ಗ್ರಾಹಕ ರಾಷ್ಟçವಾದ ಭಾರತ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ತೈಲ ದರ ಏರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದೆ. ಸೌದಿ ಹಾಗೂ ಇತರೆ ತೈಲ ಮಾರಾಟ ರಾಷ್ಟçಗಳು ಸಮಾಲೋಚನೆ ನಡೆಸಿ ರೀಸನೆಬಲ್ ದರ ನಿಗದಿಪಡಿಸಲು ಭಾರತ ಸಲಹೆ ನೀಡಿದೆ. ಕೊರೊನಾದಿಂದ ಕುಸಿತ ಕಂಡಿರುವ ದೇಶಗಳ ಆರ್ಥಿಕತೆ ಈಗ ತಾನೆ ಚೇತರಿಕೆ ಹಾದಿಯಲ್ಲಿದೆ. ಆದರೆ ತೈಲ ದರ ಏರಿಕೆಯಿಂದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ಭಾರತ ಎಚ್ಚರಿಕೆ ನೀಡಿದೆ. ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆ ಪ್ರಮಾಣದಷ್ಟು ಏರಿಕೆ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್ಥಿಕ ಚೇತರಿಕೆ ಕುಂಠಿತಗೊಳ್ಳಲಿದೆ ಎಂದು ಇಂಧನ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದರು. ಕಳೆದ ವರ್ಷ ಕೊರೊನಾದಿಂದಾಗಿ ಜಗತ್ತಿನೆಲ್ಲೆಡೆ ಲಾಕ್‌ಡೌನ್ ಹೇರಿಕೆಯಾದಾಗ ತೈಲ ದರ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿತ್ತು. ಲಾಕ್‌ಡೌನ್ ನಿರ್ಬಂಧ ತೆಗೆದಾಗಿನಿಂದ ತೈಲ ಬೇಡಿಕೆ ಏಕಾಏಕಿ ಹೆಚ್ಚಿತ್ತು. ಆಗಿನಿಂದ ತೈಲ ದರ ಏರಿಕೆಯ ಹಾದಿಯಲ್ಲಿಯೇ ಇದೆ. ೨೦೨೦ರಲ್ಲಿ ಭಾರತದ ತೈಲ ಆಮದು ವೆಚ್ಚ ೮೮೦ ಕೋಟಿ ಡಾಲರ್‌ನಷ್ಟಿತ್ತು. ಈ ವರ್ಷ ಬೆಲೆ ಏರಿಕೆಯಿಂದಾಗಿ ೨,೪೦೦ ಕೋಟಿ ಡಾಲರ್ ತಲುಪಿದೆ.
ನಕ್ಸಲರೊಂದಿಗೆ ನಂಟು ಆರೋಪ-ಇಬ್ಬರು ಖುಲಾಸೆ
ಮಂಗಳೂರು, ಅ. ೨೧: ೨೦೧೨ ರಲ್ಲಿ ನಕ್ಸಲರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ನಕ್ಸಲ್ ನಿಗ್ರಹ ಪಡೆಯಿಂದ ಬಂಧನಕ್ಕೊಳಗಾಗಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ಮಂಗಳೂರಿನ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಇಂದು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಟ್ಲೂರು ನಿವಾಸಿಗಳಾದ ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ವಿಠಲನನ್ನು ಮಾರ್ಚ್ ೩, ೨೦೧೨ ರಂದು ಎಎನ್‌ಎಫ್ ಬಂಧಿಸಿತ್ತು ಮತ್ತು ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್‌ನಲ್ಲಿ ವಿಠಲನನ್ನು ೬ನೇ ಮತ್ತು ಆತನ ತಂದೆ ಲಿಂಗಣ್ಣನನ್ನು ಪ್ರಕರಣದ ೭ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಬಂಧಿಸಿದ್ದ ಸಮಯದಲ್ಲಿ ವಿಠಲ ಮಲೆಕುಡಿಯ ಅವರು ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಪರೀಕ್ಷೆಗೆ ಹಾಜರುಪಡಿಸಿದ್ದ ಪೊಲೀಸರು, ಕೈಕೋಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಆರ್ಯನ್ ಖಾನ್ ನ್ಯಾಯಾಂಗ ಬಂಧನ ವಿಸ್ತರಣೆ
ಮುಂಬೈ, ಅ. ೨೧: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೊಳಗಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಎನ್‌ಸಿಬಿ ವಿಶೇಷ ಸೆಷನ್ಸ್ ಕೋರ್ಟ್ ತಾ. ೩೦ ರವರೆಗೆ ವಿಸ್ತರಿಸಿದೆ. ಆರೋಪಿಗಳನ್ನು ದೈಹಿಕವಾಗಿ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಆರ್ಯನ್ ಖಾನ್ ಅವರನ್ನು ಈ ಮೊದಲು ತಾ. ೭ ರಂದು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ೧೪ ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಅದನ್ನು ತಾ. ೩೦ ರವರೆಗೆ ವಿಸ್ತರಿಸಿದೆ.