ಸೋಮವಾರಪೇಟೆ, ಅ. ೨೦: ಜಿಲ್ಲೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯಕ್ಕಾಗಿ ಪಂಪ್‌ಸೆಟ್ ಅಳವಡಿಸಿ ನೀರು ಹಾಯಿಸುತ್ತಿದ್ದು, ವಿದ್ಯುತ್ ಬಿಲ್ ನೆಪದಲ್ಲಿ ಇಲಾಖೆಯವರು ವಿದ್ಯುತ್ ಸ್ಥಗಿತಕ್ಕೆ ಮುಂದಾದರೆ ಜಿಲ್ಲಾದ್ಯಂತ ಹೋರಾಟ ಸಂಘಟಿಸಲಾಗುವುದು ಎಂದು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಸಫಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ರೈತ ಸಂಘದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೋಮವಾರಪೇಟೆ ತಾಲೂಕಿನ ವಿವಿಧೆಡೆಗಳಲ್ಲಿ ರೈತರು ಕೃಷಿಗಾಗಿ ಬಳಸುತ್ತಿರುವ ಬೋರ್ವೆಲ್‌ನ ಬಿಲ್ ಪಾವತಿ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಖಂಡನೀಯ. ಈ ಬಗ್ಗೆ ಇಲ್ಲಿನ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯವಾದರೆ ರಾಜ್ಯ ರೈತ ಸಂಘ ಸಹಿಸುವುದಿಲ್ಲ ಎಂದ ಅವರು, ಸರ್ಕಾರ ಈ ಬಗ್ಗೆ ತುರ್ತು ಗಮನ ಹರಿಸಬೇಕು ಹಾಗು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೆ ಜಿಲ್ಲೆಯ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕಿದೆ. ವಿದ್ಯುತ್ ಸಮಸ್ಯೆ ಸೇರಿದಂತೆ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮನು ಸೋಮಯ್ಯ ಹೇಳಿದರು.

ಈ ಸಂದರ್ಭ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಬೋಪಯ್ಯ, ಕಾರ್ಯದರ್ಶಿ ಚಂಗಪ್ಪ, ಸಂಚಾಲಕರಾದ ಸುಬ್ಬಯ್ಯ, ಸೋಮವಾರಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ದಾಮೋದರ, ಸಂಚಾಲಕ ರಾಜಪ್ಪ, ಶಾಂತಮಲ್ಲಪ್ಪ, ಗಣಗೂರು, ನೇರುಗಳಲೆ, ಬಾಣಾವರ ರೈತ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಘಟಕದ ಪ್ರಮುಖರಾದ ರಾಯ್ ಮಾದಪ್ಪ, ಮಾಚಯ್ಯ, ಎಸ್.ಎಸ್. ಸುರೇಶ್, ಬಿದ್ದಪ್ಪ, ಗಿರೀಶ್, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.