ಶ್ರೀಮಂಗಲ, ಅ. ೨೦: ಪ್ರಭಾವಿ ಗಳಿಗೆ ಮತ್ತು ರಾಜಕಾರಣಿಗಳಿಗೆ ಕೊಡಗು ಜಿಲ್ಲೆಯಲ್ಲಿ ಅಕ್ರಮವಾದ ಬೇನಾಮಿ ಹೆಸರಿನಲ್ಲಿ ಆಸ್ತಿ-ಭೂಮಿ ಹೊಂದಿದ್ದು, ಅವುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಕಾನೂನು ರೀತಿಯಲ್ಲಿ ಒಪ್ಪದ ನಿಷ್ಠಾವಂತ ಜಿಲ್ಲಾಧಿಕಾರಿಗಳನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಅಮ್ಮತ್ತಿನಾಡು ರೈತ ಸಂಘ, ಕೊಡಗು ಬೆಳೆಗಾರ ಒಕ್ಕೂಟ ಮತ್ತು ಜಿಲ್ಲಾ ಸರ್ವೋದಯ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ಅವರು ಈ ಹಿಂದೆ ಇದ್ದ ಶ್ರೀವಿದ್ಯಾ ಅವರನ್ನು ಅವಧಿಪೂರ್ವ ವಾಗಿ, ಈಗ ಇದ್ದ ಚಾರುಲತಾ ಸೋಮಲ್ ಅವರನ್ನು ಕೇವಲ ೭ ತಿಂಗಳಲ್ಲಿ ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ಆಡಳಿತ ಪಕ್ಷದಲ್ಲಿರುವ ಈರ್ವರು ಶಾಸಕರ ನಿಲುವೇನು, ಇವರು ಏಕೆ ಮೌನವಹಿಸಿದ್ದಾರೆ ಅಥವಾ ಇವರ ಶಿಫಾರಸಿನಿಂದಲೇ ವರ್ಗಾವಣೆ ನಡೆದಿದೆಯೇ ಎಂದು ಪ್ರಶ್ನಿಸಿದರು.

ಕೊಡಗಿನ ನೆಲವನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಿಂದ ನದಿಗಳು ಜೀವಕಳೆಯನ್ನು ಕಳೆದುಕೊಂಡು, ಎಂದೂ ಸರಿಪಡಿಸಲಾಗದ ದುಷ್ಪರಿಣಾಮ ಎದುರಾಗಲಿದೆ ಎಂದು ಎಚ್ಚರಿಸಿದರು.

ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲಾಧಿಕಾರಿ ಗಳನ್ನು ರಾಯಚೂರು, ರಾಯಚೂರಿನ ಜಿಲ್ಲಾಧಿಕಾರಿಗಳನ್ನು ಕೊಡಗು ಜಿಲ್ಲೆಗೆ ವರ್ಗಾಯಿಸುವ ಅಗತ್ಯ ಏನಿತ್ತು. ಜಿಲ್ಲಾಧಿಕಾರಿಗಳ ಮೇಲೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಅತಿವೃಷ್ಟಿ ಬೆಳೆ ನಷ್ಟ ಪರಿಹಾರಕ್ಕೆ ಸಮೀಕ್ಷೆ, ಸರಕಾರಿ ಆಸ್ತಿ ಪಾಸ್ತಿ ನಷ್ಟ ಅನುದಾನ ಬಿಡುಗಡೆ ಇತ್ಯಾದಿ ಪರಿಶೀಲನೆ ಹಂತದಲ್ಲಿರು ವಾಗ ಅವಧಿಪೂರ್ವ ವರ್ಗಾವಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶದ ಬೆಳೆ ನಷ್ಟಕ್ಕೆ ಜಿಲ್ಲಾಧಿಕಾರಿ ಯವರು ಸಮೀಕ್ಷೆ ಕೈಗೊಂಡು ಪರಿಹಾರ ನೀಡುವ ಆಲೋಚನೆ ಯಲ್ಲಿದ್ದರು. ಕಳೆದ ವರ್ಷದಷ್ಟೇ ಮಳೆಯಾಗಿದ್ದರೂ ಕಳೆದ ವರ್ಷ ಪರಿಹಾರ ನೀಡಲಾಗಿದ್ದು, ಪ್ರಸಕ್ತ ವರ್ಷ ಬೆಳೆ ಪರಿಹಾರ ಪ್ರಕ್ರಿಯೆಗೆ ಮುಂದಾಗಿದ್ದ ಜಿಲ್ಲಾಧಿಕಾರಿಗಳನ್ನು ವರ್ಗಾಯಿಸುವ ಮೂಲಕ ಪರಿಹಾರದಿಂದ ಬೆಳೆಗಾರರು ವಂಚಿತರಾಗುವAತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಭೂ ಕಾಯಿದೆ ಸೆಕ್ಷನ್ ೯೫(೨), ರೂಲ್ಸ್ ೨(೨) ಕೆ.ಎಲ್.ಜಿ.ಯಂತೆ ಕೊಡಗಿನ ಭತ್ತದ ಗದ್ದೆ ಮತ್ತು ಕಾಫಿತೋಟವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಆದ್ದರಿಂದ ಗದ್ದೆ ಮತ್ತು ಕಾಫಿತೋಟ ಗಳನ್ನು ವಾಣಿಜ್ಯ ಉದ್ದೇಶದ ಪರಿವರ್ತನೆಗೆ ಅವಕಾಶವಿಲ್ಲ. ಈ ಬಗ್ಗೆ ರಾಜ್ಯ ಅಕೌಂಟೆAಟ್ ಜನರಲ್ ಅವರು ತಾ. ೧೬.೦೩.೨೦೧೮ ರಂದು ಕೊಡಗು ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದು, ೨೦೧೧ ರಿಂದ ೫ ಜಿಲ್ಲಾಧಿಕಾರಿಗಳ ಅವಧಿಯಿಂದ ನೋಟೀಸ್‌ನ ದಿನಾಂಕದವರೆಗೆ ಆಗಿರುವ ವಾಣಿಜ್ಯ ಭೂಪರಿವರ್ತನೆ ಬಗ್ಗೆ ಪ್ರಶ್ನಿಸಿ ವರದಿ ಕೇಳಿದ್ದಾರೆ. ಜಿಲ್ಲಾಧಿಕಾರಿಗಳಿಗೂ ವಾಣಿಜ್ಯ ಉದ್ದೇಶಕ್ಕೆ ಜಿಲ್ಲೆಯ ಭೂಮಿಯನ್ನು ಪರಿವರ್ತಿಸುವ ಅಧಿಕಾರ ಇಲ್ಲ ಎಂಬದನ್ನು ಉಲ್ಲೇಖಿಸಿದ್ದಾರೆ.

ಇದಲ್ಲದೆ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ) ವಿಜ್ಞಾನಿ ರಾಮಚಂದ್ರ ಅವರು ‘ಅರ್ಬನ್ ಡೈನಾಮಿಕ್ಸ್ ಇನ್ ಕೂರ್ಗ್’ ಎಂಬ ತಾಂತ್ರಿಕ ವರದಿಯಲ್ಲಿ ಕೊಡಗಿನ ಬೌಗೋಳಿಕ ಲಕ್ಷಣಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ. ಕೊಡಗಿನ ಭೂ ಪ್ರದೇಶ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ, ಧಕ್ಕೆ ತರುವ ಯೋಜನೆ ಸೂಕ್ತವಲ್ಲ. ಹೀಗೆ ಮಾಡಿದ್ದಲ್ಲಿ ಜಿಲ್ಲೆಯಲ್ಲಿ ಭೂಕುಸಿತ ಸೇರಿದಂತೆ ಮತ್ತಷ್ಟು ಪ್ರಾಕೃತಿಕ ದುರಂತಕ್ಕೆ ಅನುವು ಮಾಡಿದಂತೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಇವೆರಡು ವರದಿಗಳನ್ನು ಸರಕಾರ ಮತ್ತು ಉಚ್ಚನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ಜಿಲ್ಲಾ ಸರ್ವೋದಯ ಹಿತರಕ್ಷಣಾ ಸಮಿತಿ ಕೊಕ್ಕಂಡ ಎನ್. ಕಾವೇರಪ್ಪ ಮಾತನಾಡಿ, ಜಿಲ್ಲೆಯಲ್ಲಿ ೩೨ ವಿಧದ ಭೂ ಪ್ರಾಕಾರಗಳಿವೆ. ಇವು ಸೇರಿದಂತೆ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಇಲ್ಲಿಗೆ ಬರುವ ಜಿಲ್ಲಾಧಿಕಾರಿಗಳಿಗೆ ಕನಿಷ್ಟ ಐದಾರು ತಿಂಗಳು ಬೇಕಾಗುತ್ತದೆ. ಹೀಗಿರುವಾಗ ಜಿಲ್ಲಾಧಿಕಾರಿಗಳನ್ನು ಕೇವಲ ೭ ತಿಂಗಳಲ್ಲಿ ವರ್ಗಾಯಿಸಲು ಕಾರಣ ಏನು? ದಕ್ಷ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲೆಯ ರಾಜಕಾರಣಿಗಳಿಗೆ ಹೊಂದಾಣಿಕೆ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಅಮ್ಮತ್ತಿ ರೈತ ಸಂಘದ ಜಂಟಿ ಕಾರ್ಯದರ್ಶಿ ಪಿ.ಬಿ. ಹರಿ, ಬೆಳೆಗಾರ ಕೇಚಮಾಡ ವಿಶ್ವಾಸ್ ಹಾಜರಿದ್ದರು.