ಪೊನ್ನಂಪೇಟೆ, ಅ. ೧೯: ಭಾರಿ ಸುದ್ದಿಯಾಗುವ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಯಲ್ಲಿ ದಾಖಲಾಗಿರುವ ಎಸ್.ಎಂ. ಎ. ರೋಗ ಬಾಧಿತ ೧೦ ತಿಂಗಳ ಹಸುಳೆಯ ಜೀವ ಉಳಿಸಲು ವೈದ್ಯ ಲೋಕ ಪಣತೊಟ್ಟಿದೆ. ಈ ಹಿನ್ನೆಲೆ ತಜ್ಞ ವೈದ್ಯರ ತಂಡ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಆದರೆ ಭಾರೀ ಮೊತ್ತದ ಹಣದ ಕೊರತೆ ಯಿಂದಾಗಿ ಮಗುವಿಗೆ ಮುಖ್ಯವಾಗಿ ನೀಡಬೇಕಾಗಿರುವ ಚುಚ್ಚುಮದ್ದನ್ನು ಇದುವರೆಗೂ ನೀಡಲಾಗಿಲ್ಲ. ಕಳೆದ ಬುಧವಾರದಂದು ಈ ಮಗುವನ್ನು ವಿಶೇಷ ಆ್ಯಂಬುಲೆನ್ಸ್ ಮೂಲಕ ಜ್ಹೀರೋ ಟ್ರಾಫಿಕ್‌ನಲ್ಲಿ ಕೇವಲ ೪.೦೮ ಗಂಟೆಗಳ ಅವಧಿಯಲ್ಲಿ ಕೇರಳದ ಕಣ್ಣನೂರಿನಿಂದ ಕೊಡಗು ಮಾರ್ಗ ವಾಗಿ ಬೆಂಗಳೂರಿಗೆ ಕರೆತರಲಾಗಿತ್ತು.
ಎಸ್.ಎಂ.ಎ. ಕಾಯಿಲೆಯ ಚಿಕಿತ್ಸೆಗೆ ಭಾರಿ ಮೊತ್ತದ ಹಣದ ಅಗತ್ಯವಿದೆ. ಅಮೇರಿಕಾ ಮೂಲದ ಕಂಪೆನಿಯಿAದಲೇ ಔಷಧಿಯನ್ನು ತರಿಸಬೇಕಾಗಿದೆ. ಎಸ್.ಎಂ.ಎ. ಚಿಕಿತ್ಸೆಯ ಒಟ್ಟು ಔಷಧಿಗಾಗಿ ರೂ. ೧೮ ಕೋಟಿಯಷ್ಟು ವೆಚ್ಚವಾಗುತ್ತದೆ ಎಂಬುದು ವೈದ್ಯರ ಹೇಳಿಕೆ. ಆರ್ಥಿಕ ವಾಗಿ ಸದೃಢರಲ್ಲದ ಮಗುವಿನ ಪೋಷಕರು ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಯಾಚಿಸಿದ್ದಾರೆ. ಇದರಿಂದಾಗಿ ಮಗುವಿನ ತಂದೆಯ ಊರಿನಲ್ಲಿ ಸ್ಥಳೀಯ ಹಿರಿಯ ಸಮಾಜ ಸೇವಕರಾದ ಸಜಿತ ಮತ್ತು ಎ.ಕೆ. ಇಬ್ರಾಹಿಂ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳನ್ನು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಜನಾಂಗಗಳ ಪ್ರತಿನಿಧಿಗಳ ನ್ನೊಳಗೊಂಡ ‘ಇನಾರ ಮರಿಯಂ ಎಸ್.ಎಂ.ಎ. ಚಿಕಿತ್ಸಾ ಸಹಾಯ ನಿಧಿ ಸಂಗ್ರಹಣಾ ಸಮಿತಿ'ಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಈ ಮಗುವಿನ ಚಿಕಿತ್ಸಾ ಸಹಾ ಯಾರ್ಥ ಕೇರಳದಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ಜರುಗಿದ್ದು, ಚಿಕಿತ್ಸೆಗಾಗಿ ಹಣ ಸಂಗ್ರಹವಾಗತೊಡಗಿದೆ. ೧೦ ತಿಂಗಳ ಈ ಮುಗ್ಧ ಜೀವವನ್ನು ಉಳಿಸಲು ಮುಂದಿನ ೨ ತಿಂಗಳೊಳಗಾಗಿ ಮಗುವಿಗೆ ಪೂರ್ಣಪ್ರಮಾಣದ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ಈ ಕಾರಣದಿಂದ ನಿಯಮದಂತೆ ಸಂಬAಧಿತ ವೈದ್ಯರ ಮೂಲಕ ಔಷಧಿಗೆ ನೋಂದಣಿ ಮಾಡಿದ್ದು, ಕೆಲವೇ ದಿನಗಳಲ್ಲಿ ಔಷಧಿ ಭಾರತಕ್ಕೆ ಬರಲಿದೆ. ಅದರೊಳಗಾಗಿ ಚಿಕಿತ್ಸೆಯ ವೆಚ್ಚ ಸಂಗ್ರಹವಾಗಬೇಕಿದೆ. ಚಿಕಿತ್ಸೆಗಾಗಿ ಇನ್ನೂ ೧೫ ಕೋಟಿ ಹಣದ ಕೊರತೆಯಿದೆ ಎಂದು ತಿಳಿಸಿರುವ ‘ಇನಾರ ಮರಿಯಂ ಎಸ್.ಎಂ.ಎ. ಚಿಕಿತ್ಸಾ ಸಹಾಯ ನಿಧಿ ಸಂಗ್ರಹಣಾ ಸಮಿತಿ'ಯ ಮುಖ್ಯಸ್ಥ ಎ.ಕೆ. ಇಬ್ರಾಹಿಂ ಅವರು, ಮಗುವಿನ ಜೀವ ಉಳಿಸಲು ಸಾರ್ವಜನಿಕರ ಆರ್ಥಿಕ ನೆರವು ಅಗತ್ಯವಿದೆ ಎಂದು ಹೇಳಿದ್ದಾರೆ.
ಎಸ್.ಎಂ.ಎ. ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಏಷ್ಯಾದಲ್ಲೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಯಲಹಂಕ ದಲ್ಲಿರುವ ಬ್ಯಾಪ್ಟಿಕ್ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞರಾದ, ಈಗಾಗಲೇ ೨೫ಕ್ಕೂ ಹೆಚ್ಚು ಎಸ್.ಎಂ.ಎ. ಬಾಧಿತ ಮಕ್ಕಳಿಗೆ ಚಿಕಿತ್ಸೆ ನೀಡಿರುವ ಡಾ. ಆನ್ ಆಗ್ನೆಸ್ ಮ್ಯಾಥ್ಯೂ ಅವರು ಇತ್ತೀಚೆಗೆ ಮಗುವನ್ನು ಬೆಂಗಳೂರಿನಲ್ಲಿ ಪರೀಕ್ಷಿಸಿದಾಗ ಮಗುವಿಗೆ ಗರಿಷ್ಠ ಒಂದು ವರ್ಷ ಪ್ರಾಯದೊಳಗೆ ತೀರಾ ಅಗತ್ಯವಿರುವ ಅಮೇರಿಕಾ ಮೂಲದ ಔಷಧಿಯನ್ನು ನೀಡಲೇಬೇಕು. ಇದರಿಂದ ಮಾತ್ರ ಮಗುವಿನ ಪ್ರಾಣ ಉಳಿಯಲು ಸಾಧ್ಯ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇನಾರ ಮರಿಯಂಗೆ ೧ ವರ್ಷ ಪೂರೈಸಲು ಇನ್ನು ಕೇವಲ ೨ ತಿಂಗಳು ಮಾತ್ರ ಬಾಕಿ ಉಳಿದಿರುವುದರಿಂದ ಈ ಅವಧಿಯೊಳಗಾಗಿ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ. ಡಾ. ಆನ್ ಆಗ್ನೆಸ್ ಮ್ಯಾಥ್ಯೂ ಸಲಹೆಯ ಮೇರೆಗೆ ಬೆಂಗಳೂರಿನ ಮಣಿಪಾಲದ ಆಸ್ಪತ್ರೆಯ ಮಕ್ಕಳ ರೋಗ ತಜ್ಞರಾದ ಡಾ. ಎಲನ್ ಕಿಲ್ನಿ ಅವರೊಂದಿಗೆ ಕಳೆದ ೬ ದಿನಗಳ ಹಿಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚಿಸಿದಾಗ ಮಗುವಿನ ಪ್ರಾಣ ಉಳಿಸಲು ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರಲ್ಲದೆ, ಔಷಧಿ ಭಾರತಕ್ಕೆ ಬರುವವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲು ಒಪ್ಪಿಗೆ ನೀಡಿದರು. ಕಣ್ಣನೂರಿನಲ್ಲಿ ಈ ಕುರಿತ ಸೂಕ್ತ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.
ಆದ್ದರಿಂದ ಕೂಡಲೇ ಮಗುವನ್ನು ಬೆಂಗಳೂರಿಗೆ ಕರೆತರುವಂತೆ ಅವರು ಸೂಚಿಸಿದರು. ಎಸ್.ಎಂ.ಎ. ರೋಗ ಬಾಧಿಸಿರುವ ಮಗುವನ್ನು ಹೆಲಿಕ್ಯಾಪ್ಟರ್ ಅಥವಾ ವಿಮಾನದ ಮೂಲಕ ಸಾಗಿಸುವುದು ಅಪಾಯಕಾರಿ ಯಾಗಿರುವುದರಿಂದ ಸಂಚಾರಿ ಐಸಿಯು ಹೊಂದಿರುವ ಆ್ಯಂಬುಲೆನ್ಸ್ ಮೂಲಕವೇ ರಸ್ತೆ ಮಾರ್ಗವಾಗಿ ಕರೆತರುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಕಾರಣದಿಂದ ಮಗುವಿಗೆ ಗಂಟೆಗೆ ೪೦ ಲೀ. ಆಮ್ಲಜನಕವನ್ನು ಪೂರೈಸುತ್ತಾ ಕಣ್ಣನೂರಿನಿಂದ ಬೆಂಗಳೂರಿಗೆ ಸಾಗಿಸುವುದು ಅನಿವಾರ್ಯವಾಗಿತ್ತು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕಣ್ಣನೂರು-ಬೆಂಗಳೂರು ಹೆದ್ದಾರಿ
ಬೆನ್ನುಮೂಳೆಯ ಸ್ನಾಯು ಕ್ಷೀಣತೆ (Sಠಿiಟಿಚಿಟ ಒusಛಿuಟಚಿಡಿ ಂಣhಡಿoಠಿಥಿ-SಒA) ಎಂಬ ಮಾರಕ ಕಾಯಿಲೆಗೆ ತುತ್ತಾಗಿರುವ ಕಣ್ಣನೂರು ಸಮೀಪದ ತಲಚೇರಿಯ ಮೊಯಪ್ಪಲಂಗಾಡ್ ಗ್ರಾಮದ ಇನಾರ ಮರಿಮಂ ಎಂಬ ೧೦ ತಿಂಗಳ ಹಸುಳೆಯನ್ನು ಕಳೆದ ಬುಧವಾರ ಕಣ್ಣಾನೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ವಿಶೇಷ ಆ್ಯಂಬುಲೆನ್ಸ್ ಮೂಲಕ ಸಾಗಿಸಿದ ಸುದ್ದಿ ದೇಶದಾದ್ಯಂತ ಗಮನ ಸೆಳೆದಿತ್ತು. ತುರ್ತು ಚಿಕಿತ್ಸೆಯ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಕಳೆದ ಬುಧವಾರ ಬೆಳಿಗ್ಗೆ ೧೦.೫೫ಕ್ಕೆ ಕಣ್ಣನೂರಿನಿಂದ ಹೊರಟ ಬೆಂಗಳೂರು ಕೆ.ಎಂ.ಸಿ.ಸಿ. ಸಂಘಟನೆಯ ಅತ್ಯಾಧುನಿಕ ಆ್ಯಂಬುಲೆನ್ಸ್ ಮಟ್ಟನೂರು- ಇರಿಟ್ಟಿ-ಕೂಟುಹೊಳೆ- ಪೆರುಂಬಾಡಿ-ಬಿಟ್ಟAಗಾಲ-ಗೋಣಿಕೊಪ್ಪಲು ಮಾರ್ಗವಾಗಿ ಹುಣಸೂರು-ಹಿನಕಲ್ ರಿಂಗ್ ರಸ್ತೆ-ಮಂಡ್ಯ-ಮದ್ದೂರು-ಚನ್ನಪಟ್ಟಣ ಕೆಂಗೇರಿ-ನಾಯAಡಹಳ್ಳಿ ಕಲಾಸಿಪಾಳ್ಯ-ಕಾರ್ಪೊರೇಷನ್ ವೃತ್ತ- ಎಂ.ಜಿ. ರಸ್ತೆ.-ಟ್ರಿನಿಟಿ ವೃತ್ತದ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಆ್ಯಂಬುಲೆನ್ಸ್ಸ್ ತಲುಪಿದಾಗ ಮಧ್ಯಾಹ್ನ ೩.೦೩ ಸಮಯವಾಗಿತು. ಆ್ಯಂಬುಲೆನ್ಸ್ ಸಾಗಿದ ಮಾರ್ಗದುದ್ದಕ್ಕೂ ಇರುವ ನಗರ ಮತ್ತು ಪಟ್ಟಣಗಳಲ್ಲಿ ಒಂದು ತಾಸಿಗಿಂತಲೂ ಹೆಚ್ಚು ಸಮಯದಿಂದ ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದ ಸಾವಿರಾರು ಜನತೆ ಮಗುವಿನ ಚೇತರಿಕೆಗಾಗಿ ಮನ ಮಿಡಿದಿದ್ದರು. ಪೊಲೀಸರ ಮತ್ತು ಜನರ ಸಹಕಾರದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ಅಂತಿಮವಾಗಿ ಆಂಬುಲೆನ್ಸ್ ಆಸ್ಪತ್ರೆಯನ್ನು ಸೇರಿದಾಗ ಈ ಕುರಿತು ತೀವ್ರ ಆಸಕ್ತರಾಗಿದ್ದ ಲಕ್ಷಾಂತರ ಜನತೆ ನಿಟ್ಟುಸಿರುಬಿಟ್ಟಿದ್ದರು.
ಈ ಮಧ್ಯೆ ಹುಣಸೂರು-ಗೋಣಿಕೊಪ್ಪಲು ಹೆದ್ದಾರಿ ನಡುವಿನ ತಿತಿಮತಿ ಪಟ್ಟಣದ ಬಳಿ ಕೆಲವು ದೂರದ ರಸ್ತೆಯ ಅಲ್ಲಲ್ಲಿ ಗುಂಡಿಗಳು ಉಂಟಾಗಿತ್ತು. ಇದರಿಂದಾಗಿ ತಿತಿಮತಿ ಬಳಿ ಆ್ಯಂಬುಲೆನ್ಸ್ನ ವೇಗಕ್ಕೆ ಅನಾನುಕೂಲವಾಗುತ್ತದೆ ಎಂದು ಮನಗಂಡ ಶಿಕ್ಷಕರಾದ ಮಹೇಶ್ ಧರ್ಮಲಿಂಗA ಪಿಳ್ಳೆöÊ ಅವರ ನೇತೃತ್ವದ ಸ್ಥಳೀಯ ಯುವಕರ ತಂಡ, ಬೆಳಿಗ್ಗೆ ದಿಢೀರನೆ ಧಾವಿಸಿ ರಸ್ತೆ ಮಧ್ಯದಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿ ಮಾನವೀಯತೆಯ ಪ್ರತೀಕವಾದರು. ಇದರಿಂದ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಹೆಚ್ಚು ಸಹಕಾರಿಯಾಯಿತು. ತಿತಿಮತಿಯ ಈ ಯುವಕರ ಸಮಾಜಮುಖಿ ನೆರವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇವರ ಈ ಸಾಮಾಜಿಕ ಕಾರ್ಯದ ವೀಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದು ಕಂದಮ್ಮನನ್ನು ವಿಶೇಷ ಆ್ಯಂಬುಲೆನ್ಸ್ ಮೂಲಕ ಸಾಗಿಸುವಾಗ ಮಗುವಿನ ಜಾತಿ, ಊರು, ಭಾಷೆ, ರಾಜ್ಯವನ್ನು ಲೆಕ್ಕಿಸದ ಸಂಖ್ಯಾತ ಜನತೆ ‘ಮನುಷ್ಯನ ಮಗು' ಎಂಬ ಒಂದೇ ಉದ್ದೇಶದಿಂದ ರೋಗ ಬಾಧಿತ ಈ ಹಸುಳೆ ಶೀಘ್ರದಲ್ಲೇ ಗುಣಮುಖ ವಾಗಲಿ. ಪೋಷಕರು ಸೇರಿದಂತೆ ಲಕ್ಷಾಂತರ ಜನರ ನಿರೀಕ್ಷೆಯನ್ನು ಹುಸಿಗೊಳಿಸದಿರಲಿ ಎಂಬುದೇ ಅಂದು ಎಲ್ಲರ ಪ್ರಾರ್ಥನೆಯಾಗಿತ್ತು. ಈ ಮೂಲಕ ಜಾತಿ-ಧರ್ಮ, ಭಾಷೆ-ರಾಜ್ಯಗಳ ಸಂಕೋಲೆ ಕಳಚಿ ಮನ ಮಿಡಿದ ಮನುಕುಲ ಮಾನವೀಯತೆಗೆ ಸಾವಿಲ್ಲ ಮತ್ತು ಮನುಷ್ಯತ್ವಕ್ಕೆ ಎಂದೂ ಸೋಲಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತ್ತು. ಹೀಗೆ ಕಣ್ಣನೂರು-ಬೆಂಗಳೂರು ಹೆದ್ದಾರಿ ಕಳೆದ ಬುಧವಾರದಂದು ಐತಿಹಾಸಿಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯ್ತು.
ಕೇವಲ ೪.೦೮ ಗಂಟೆಗಳ ಅವಧಿಯಲ್ಲಿ ೩೪೦ ಕಿ.ಮೀ. ದೂರವನ್ನು ಚಾಲಿಸಿದ ಆ್ಯಂಬುಲೆನ್ಸ್ಸ್ ಚಾಲಕ ಹನೀಫ್‌ನನ್ನು ಅಂದು ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಜನತೆ ಹರ್ಷೋದ್ಗಾರಗಳ ಮೂಲಕ ಅಭಿನಂದಿಸಿದ ದೃಶ್ಯ ಕಂಡುಬAತು. ಇದರಿಂದ ಬೆಳ್ತಂಗಡಿ ಮೂಲದ ಚಾಲಕ ಹನೀಫ್ ‘ರಿಯಲ್ ಹೀರೊ' ಆದರು. ಇದಕ್ಕೂ ಮೊದಲು ಮಂಗಳೂರಿನಿAದ ಬೆಂಗಳೂರಿಗೆ ೪.೧೦ ಗಂಟೆ ಅವಧಿಯಲ್ಲಿ, ಬೆಂಗಳೂರಿನಿAದ ಕೇರಳದ ಕಲ್ಲಿಕೋಟೆಗೆ ೫ ಗಂಟೆ ಅವಧಿಯಲ್ಲಿ ಆ್ಯಂಬುಲೆನ್ಸ್ ಚಾಲಿಸಿ ಗಮನಸೆಳೆದಿದ್ದ ಹನೀಫ್, ೬ನೇ ಬಾರಿಗೆ ಅಮೂಲ್ಯ ಮನುಷ್ಯ ಜೀವವೊಂದನ್ನು ತಮ್ಮ ಪ್ರಾಣ ಪಣಕ್ಕಿಟ್ಟು ಸವಾಲುಗಳ ನಡುವೆ ಸಾಹಸಮಯವಾಗಿ ಆಸ್ಪತ್ರೆಗೆ ತಲುಪಿಸಿದ ಕೀರ್ತಿಗೆ ಪಾತ್ರರಾದರು. ಇದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಹನೀಫ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರತೊಡಗಿದೆ.
ತ್ರಿವಳಿ ಮಕ್ಕಳ ಪೈಕಿ ಒಬ್ಬಳಾಗಿರುವ ಇನಾರ ಮರಿಯಂ
ಕಳೆದ ೩ ವರ್ಷಗಳ ಹಿಂದೆ ವಿವಾಹವಾಗಿದ್ದ ಕಣ್ಣೂರು ಜಿಲ್ಲೆಯ ತಲಚೇರಿ ಸಮೀಪದ ಮೊಯಪ್ಪಲಂಗಾಡ್ ನಿವಾಸಿ ಮೊಹಮ್ಮದ್ ರಾಶಿದ್ ಮತ್ತು ರಿಷಾ ಫಾತಿಮಾ ದಂಪತಿಗೆ ಕಳೆದ ೧೦ ತಿಂಗಳ ಹಿಂದೆ ತ್ರಿವಳಿ ಹೆಣ್ಣು ಮಕ್ಕಳ ಜನನವಾಯಿತು. ಈ ಪೈಕಿ ಎರಡು ಮಕ್ಕಳು ಆರೋಗ್ಯದಿಂದಲೇ ಬೆಳೆಯತೊಡಗಿದರು. ಆದರೆ ಇನಾರ ಮರಿಯಂ ಎಂಬ ಮಗುವಿಗೆ ಎರಡು ತಿಂಗಳು ಕಳೆದರೂ ತನ್ನ ಕೈಕಾಲುಗಳಿಗೆ ಯಾವುದೇ ಚಲನವಲನವಿರಲಿಲ್ಲ. ಇದರಿಂದ ವೈದ್ಯರ ಬಳಿ ತೆರಳಿದ ದಂಪತಿ ಸ್ಥಳೀಯವಾಗಿ ಆರಂಭಿಕ ಚಿಕಿತ್ಸೆಯನ್ನು ಕೊಡಿಸಿದರು. ಆದರೂ ಯಾವುದೇ ಪ್ರಯೋಜನವಾಗದಿದ್ದಾಗ ಮಗುವನ್ನು ಹೆಚ್ಚಿನ ತಪಾಸಣೆ ಗೊಳಪಡಿಸಲಾಯಿತು. ಈ ವೇಳೆ ಮಗುವಿಗೆ ಕೆಲ ಉನ್ನತಮಟ್ಟದ ಪರೀಕ್ಷೆಗಳನ್ನು ವೈದ್ಯರು ಸೂಚಿಸಿದ್ದರು. ಇದರಂತೆ ಚೆನ್ನೆöÊನ ಆಸ್ಪತ್ರೆಯೊಂದರಲ್ಲಿ ಮಗುವಿನ ದೇಹದ ಮಾದರಿ ದ್ರವವನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ನೆದರ್ಲ್ಯಾಂಡ್‌ಗೆ ಕಳಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆದು ಕಳೆದ ಮೂರು ತಿಂಗಳ ಹಿಂದೆ ಫಲಿತಾಂಶ ಪ್ರಕಟಗೊಂಡಾಗ ಮಗುವಿಗೆ ಎಸ್.ಎಂ.ಎ. ಮಾರಕ ಕಾಯಿಲೆ ಬಾಧಿಸಿರುವುದು ದೃಢಪಟ್ಟಿತು.
- ರಫೀಕ್ ತೂಚಮಕೇರಿ