ಮಡಿಕೇರಿ, ಅ. ೧೯: ಮಡಿಕೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿ ಅಂತಿಮ ಕ್ಷಣದಲ್ಲಿ ಮುಂದೂಡಲ್ಪಟ್ಟ ಚುನಾವಣೆ ತಾ. ೨೯ ರಂದು ನಡೆಯಲಿದೆ. ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಈಶ್ವರ್‌ಕುಮಾರ್ ಖಂಡು ಚುನಾವಣೆಗೆ ದಿನಾಂಕ ನಿಗದಿಪಡಿಸಿ ತಾ. ೧೩ ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿರುವ ನಗರಸಭೆಗೆ ಕಳೆದ ತಾ. ೧೧ ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಹಾಗೂ ಎಸ್‌ಡಿಪಿಐನ ಮೇರಿ ವೇಗಸ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸವಿತಾ ರಾಖೇಶ್ ಹಾಗೂ ಎಸ್‌ಡಿಪಿಐನ ನೀಮಾ ಅರ್ಷದ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯ ಕೊನೆಯ ಹಂತದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ನೀಡದಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚುನಾವಣೆಯನ್ನು ಮುಂದೂಡಿದ್ದರು.
೨೯ಕ್ಕೆ ಚುನಾವಣೆ: ಇದೀಗ ಮತ್ತೆ ತಾ. ೨೯ಕ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ ನೋಟೀಸ್ ನೀಡಲಾಗಿದೆ. ಅಂದು ನಗರಸಭೆ ಸಭಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಯಿAದ ೧೧ ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಧ್ಯಾಹ್ನ ೧ ಗಂಟೆಯ ನಂತರ ನಾಮಪತ್ರ ಪರಿಶೀಲನೆ ನಡೆಯಲಿದೆ. ನಂತರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆ ಏರ್ಪಟ್ಟರೆ ಕೈ ಎತ್ತುವ ಮೂಲಕ ಮತದಾನ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.