ಮಡಿಕೇರಿ, ಅ. ೨೦: ಪ್ರಸ್ತುತದ ಸಮಾಜದಲ್ಲಿ ಧಾರ್ಮಿಕ ಆಚರಣೆಗಳು - ನಂಬಿಕೆಗಳು ಮರೆಯಾಗುತ್ತಿವೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಹಲವೆಡೆಗಳಲ್ಲಿ ಕಂಡುಬರುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಇದು ವಾಸ್ತವವೂ ಕೂಡ ಎಂದೆನಿಸುತ್ತದೆ. ಆದರೆ ಈ ವಿಚಾರದಲ್ಲಿ ಕೊಡಗಿನ ಯುವಕ - ಯುವತಿಯರು ತಾವು ಇದರಿಂದ ಹೊರತಾಗಿದ್ದೇವೆ ಎಂಬದನ್ನು ಸಾಬೀತುಪಡಿಸಿರುವುದು ಪ್ರಸಕ್ತ ವರ್ಷದ ತಲಕಾವೇರಿ ತೀರ್ಥೋದ್ಭವ ದ ಸಂದರ್ಭದಲ್ಲಿ.... ಈ ದಿನದಂದು ಜಿಲ್ಲೆ ಮಾತ್ರವಲ್ಲದೆ ವಿವಿಧೆಡೆಗಳಲ್ಲಿ ಉತ್ತಮ ಉದ್ಯೋಗದಲ್ಲಿರುವವರು, ಯುವ ಉದ್ಯಮಿಗಳು ಸೇರಿದಂತೆ ಯುವಕ - ಯುವತಿಯರು ತಲಕಾವೇರಿ ಕ್ಷೇತ್ರದತ್ತ ಸಾಗಿಬಂದಿದ್ದು, ವಿಶೇಷವಾಗಿತ್ತು.

ಇಲ್ಲಿ ಯಾವುದೇ ರೀತಿಯ ಮೋಜು - ಮಸ್ತಿಗಳ ಆಕರ್ಷಣೆ ಇರಲಿಲ್ಲ. ವೈಭವೀಕರಿಸಿದ್ದು, ಕೇವಲ ಭಕ್ತಿ - ಭಾವದ ಸಂಕೇತ ಮಾತ್ರವಾಗಿತ್ತು. ಕಾವೇರಿ ಮಾತೆಯನ್ನು ಕುಲದೇವಿಯಾಗಿ ಪೂಜಿಸುವ ಕೊಡವ ಜನಾಂಗದ ಯುವಕ - ಯುವತಿಯರು ಈ ಹಿಂದಿನ ಎಲ್ಲಾ ವರ್ಷಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಕಾಣಿಸಿ ಕೊಂಡರು. ಸಾಂಪ್ರದಾಯಿಕವಾದ ಉಡುಗೆಯೊಂದಿಗೆ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್ ಸಹಿತವಾಗಿ ತಂಡೋಪತAಡವಾಗಿ ವಿವಿಧ ಕೊಡವ ಸಂಘಟನೆಗೆ ಮೂಲಕ ಆಗಮಿಸಿದ್ದ ಇವರುಗಳು ಭಾಗಮಂಡಲದಿAದ - ತಲಕಾವೇರಿ ತನಕ ೮ ಕಿ.ಮೀ. ಅಂತರವನ್ನು ಪಾದಯಾತ್ರೆಯಲ್ಲಿ ತೆರಳುವ ಮೂಲಕ ತೀರ್ಥಯಾತ್ರೆಯ ಸೊಗಡನ್ನು ಪರಿಚಯಿಸಿದರು. ಕ್ಷೇತ್ರದಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿ ಭಕ್ತಿ - ಭಾವದ ಸಂಕೇತವಾಗಿ ತಲಕಾವೇರಿ ಸನ್ನಿಧಾನದ ಸುತ್ತಮುತ್ತಲಲ್ಲಿ ಭಜನೆ - ಮಾತೆಯ ಸ್ತುತಿಯೊಂದಿಗೆ ಯುವ ಸಮೂಹ ಗಮನ ಸೆಳೆಯಿತು. ಈ ಬಗ್ಗೆ ಮಾಧ್ಯಮಗಳಲ್ಲಿ - ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಡಿಯೋ ಸಹಿತದ ದೃಶ್ಯಾವಳಿಗಳು ಹರಿದಾಡುತ್ತಿವೆ.

ಧಾರ್ಮಿಕ ವಿಚಾರಗಳು - ನಂಬಿಕೆಗಳತ್ತ ಈಗಿನ ಯುವ ಸಮೂಹ ನಿರ್ಲಕ್ಷö್ಯ ತಾಳುತ್ತಿರು ವಂತಹ ಈಗಿನ ಸನ್ನಿವೇಶದಲ್ಲಿ ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಜಿಲ್ಲೆಯ ಈ ಯುವಕ - ಯುವತಿಯರ ತೊಡಗಿಸಿ ಕೊಳ್ಳುವಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಗೊಳ್ಳುತ್ತಿರುವದು ಕಂಡು ಬರುತ್ತಿದೆ. - ಶಶಿ