ಗೋಣಿಕೊಪ್ಪ ವರದಿ, ಅ. ೧೯: ದಕ್ಷಿಣ ಕೊಡಗಿನ ಬೋಡ್‌ನಮ್ಮೆ ಆಚರಣೆಗೆ ಕುಂದ ಬೆಟ್ಟದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ವರುಣನ ಅಬ್ಬರದ ನಡುವೆ ಸ್ಥಳೀಯರು ಆಚರಣೆಯಲ್ಲಿ ಪಾಲ್ಗೊಂಡು ದೇವರ ಹಬ್ಬ ಆಚರಿಸಿದರು. ಕುದುರೆ ಹೊತ್ತು, ಬೆಟ್ಟ ಹತ್ತಿ ಪೂಜೆ ನೆರವೇರಿಸಿ ವರ್ಷ ಪೂರ್ತಿ ದಕ್ಷಿಣ ಕೊಡಗು ಭಾಗದಲ್ಲಿ ನಡೆಯಲಿರುವ ಬೋಡ್‌ನಮ್ಮೆ ಆಚರಣೆಗೆ ಮೂಲ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ಕುಂದ ಗ್ರಾಮದಲ್ಲಿರುವ ಬಲ್ಯಮನೆಯಿಂದ ಕುದುರೆ ಹೊತ್ತು ಅಂಬಲ ಪ್ರದಕ್ಷಿಣೆ ಹಾಕಲಾಯಿತು. ಜೋಡಿ ಕುದುರೆ ಹೊತ್ತ ಗ್ರಾಮದ ಭಕ್ತರೊಂದಿಗೆ ಹಿರಿಯರು ಡೋಲು ಬಡಿದುಕೊಂಡು ದೇವರ ಹಾಡು ಹಾಡಿದರು. ಕೊಡವ ಭಾಷೆಯಲ್ಲಿ ಅಯ್ಯಪ್ಪ, ಭದ್ರಕಾಳಿ ದೇವರನ್ನು ಪ್ರಾರ್ಥಿಸಿದರು. ಬೆಟ್ಟ ಹತ್ತಿ ದೇವರ ಆಟದ ಮೂಲಕ ಸಂಭ್ರಮಿಸಿದರು.
ವಿವಿಧ ಕಟ್ಟುಪಾಡುಗಳ ಮೂಲಕ ತೀರ್ಥ ಪೂಜೆ ಮಾಡಲಾಯಿತು. ಸಾಂಪ್ರದಾಯಿಕ ವಾಲಗದೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು. ಬಿದಿರಿನಿಂದ ತಯಾರಿಸಿದ ಕೃತಕ ಕುದುರೆ ಹೊತ್ತು ಕುಣಿದು ಸಂಭ್ರಮಿಸಿ ದರು. ಮುಕ್ಕಾಟಿ ಬಾಣೆಯಲ್ಲಿ ಒಂದಾಗಿ ಕುಣಿದು ಆಚರಿಸಿದರು. ಗ್ರಾಮದ ಪುರುಷರು, ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು. ಮನೆಯಪಂಡ ಕುಟುಂಬ ದೇವತಕ್ಕರಾಗಿ, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿ, ಜವಾಬ್ದಾರಿ ನಿಭಾಯಿಸಿದರು.
ದಕ್ಷಿಣ ಕೊಡಗಿನಲ್ಲಿ ನಡೆಯುವ ಬೋಡ್ ನಮ್ಮೆಗೆ ಕಾವೇರಿ ತೀರ್ಥೋದ್ಭವದ ಮಾರನೆ ದಿನ ಕುಂದ ಬೆಟ್ಟದಲ್ಲಿ ತೀರ್ಥಪೂಜೆ ಆಚರಣೆಯೊಂದಿಗೆ ಚಾಲನೆ ನೀಡಲಾಗುತ್ತದೆ. ಈ ಆಚರಣೆಯು ಕುಂದ ಬೋಡ್‌ನಮ್ಮೆ ಎಂದು ಆರಂಭಗೊಳ್ಳುತ್ತದೆ. ಕಂಡAಗಾಲ ಗ್ರಾಮದಲ್ಲಿ ಜೂನ್ ತಿಂಗಳಿನಲ್ಲಿ ಆಚರಿಸಲ್ಪಡುವ ಪಾರಣ ಬೋಡ್‌ನಮ್ಮೆ ಮೂಲಕ ಆಚರಣೆಗೆ ತೆರೆ ಎಳೆದುಕೊಳ್ಳುತ್ತದೆ. ಇದರ ನಡುವೆ ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ, ಬಿರುನಾಣಿ, ಬಾಳಾಜಿ, ಮಾಯಮುಡಿ, ತಿತಿಮತಿ ಸುತ್ತಮುತ್ತದ ಗ್ರಾಮಗಳಲ್ಲಿ ಬೋಡ್‌ನಮ್ಮೆ ಗ್ರಾಮದ ಆಚರಣೆ ಯಂತೆ ನಡೆಯುತ್ತದೆ. ಕಾರ್ತಿಕ ಮಾಸ ಹೊರತುಪಡಿಸಿ ಬೋಡ್ ನಮ್ಮೆಗೆ ಮಾತ್ರ ಬೆಟ್ಟದಲ್ಲಿ ಪೂಜೆ ನಡೆಯುವುದರಿಂದ ಭಕ್ತರ ಸಂಖ್ಯೆ ಕೂಡ ಹೆಚ್ಚು ಕಂಡು ಬಂತು. ಮಳೆ ಲೆಕ್ಕಿಸದೆ ಬೆಟ್ಟ ಹತ್ತಿದ್ದು ವಿಶೇಷವಾಗಿತ್ತು.