ಶನಿವಾರಸಂತೆ, ಅ. ೨೦: ಲಾಠಿ ಬೀಸುವ ಕೈ........ ಗುದ್ದಲಿ, ಹಾರೆ, ಪಿಕಾಸಿ ಹಿಡಿದು ಶ್ರಮಿಸಿದರೇ ಸುಂದರ ಉದ್ಯಾನ ನಿರ್ಮಾಣವಾಗಬಲ್ಲದು ಎಂಬದಕ್ಕೆ ಶನಿವಾರಸಂತೆ ಪೊಲೀಸ್ ಠಾಣೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನ ಸಾಕ್ಷಿಯಾಗಿದೆ. ಠಾಣೆಗೆ ಬರಲು ಅಂಜುತ್ತಿದ್ದ ಸಾರ್ವಜನಿಕರು ಉದ್ಯಾನದ ಸೌಂದರ್ಯ ಸವಿಯಲು ಠಾಣೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಠಾಣೆಗೆ ದೂರು ನೀಡಲು ಬರುವ ನೊಂದವರ ಮನಸ್ಸು ಉದ್ಯಾನದ ಸೊಗಸು ಸವಿದು ಸಂತಸ ಕಾಣಲಿ ಎಂಬ ಉದ್ದೇಶದಿಂದ ಉದ್ಯಾನ ನಿರ್ಮಿಸಲಾಗಿದೆ ಎನ್ನುತ್ತಾರೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ. ಪೊಲೀಸ್ ಠಾಣೆ ಎಂದರೆ ಒಂದು ಉತ್ತಮ ಜನಸ್ನೇಹಿ ಪೊಲೀಸ್ ಎಂಬ ವಾತಾವರಣೆ ನಿರ್ಮಾಣ ಮಾಡಲು ಡಿವೈಎಸ್‌ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಠಾಣಾ ಇನ್ಸ್ಪೆಕ್ಟರ್ ಎನ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಪ್ರದೀಪ್‌ಕುಮಾರ್, ಲೋಕೇಶ್ ಹಲವಾರು ನರ್ಸರಿಗಳನ್ನು ಸುತ್ತಾಡಿದರು. ಉತ್ತಮ ತಳಿಯ ಹೂ ಗಿಡಗಳನ್ನು ಹಾಗೂ ಹುಲ್ಲಿನ ಹಾಸಿಗೆಯನ್ನು ಆಯ್ಕೆ ಮಾಡಿ, ಸೂಕ್ತ ಸಲಹೆಗಳನ್ನು ಪಡೆದರು. ಪ್ರತಿ ಸಿಬ್ಬಂದಿಯ ಶ್ರಮದ ಫಲ ಇಂದು ಠಾಣೆಯ ಆವರಣದಲ್ಲಿ ಸುಂದರ ಉದ್ಯಾನವನ ನಗುತ್ತಿದೆ. ಉದ್ಯಾನವಿಲ್ಲದ ಪಟ್ಟಣದಲ್ಲಿ ಪೊಲೀಸ್ ಠಾಣೆಯ ಉದ್ಯಾನ ನೋಡುಗರ ಕಣ್ಮನ ತಣಿಸುತ್ತಿದೆ. - ನರೇಶ್ಚಂದ್ರ