(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಅ. ೧೮: ಭಾರೀ ಸಂಖ್ಯೆಯಲ್ಲಿ ಪರರಾಜ್ಯದಿಂದ ಕಾರ್ಮಿಕರನ್ನು ಬರಮಾಡಿಕೊಳ್ಳುತ್ತಿರುವ ಮಲೆನಾಡು ಜಿಲ್ಲೆ ಕೊಡಗು. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಅದರಲ್ಲೂ ಉತ್ತರಭಾರತದ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರ ದಂಡೇ ಕಾಣುತ್ತಿದೆ. ಬಹುತೇಕ ಅಸ್ಸಾಂ, ಬಿಹಾರ ಸೇರಿದಂತೆ ಇತರೆಡೆಯ ಕಾರ್ಮಿಕರು ಜಿಲ್ಲೆಗೆ ಕೆಲಸ ಅರಸಿ ಬರುತ್ತಿದ್ದಾರೆ. ಇವರಿಗೆ ಜಿಲ್ಲೆಯ ಬೆಳೆಗಾರರು ಮಾತ್ರವಲ್ಲದೆ, ಇನ್ನಿತರ ವಹಿವಾಟು ನಡೆಸುತ್ತಿರುವವರು ಆಶ್ರಯ ಕಲ್ಪಿಸುತ್ತಿದ್ದಾರೆ.
ಈ ವಿಚಾರ ಪ್ರಸ್ತುತ ಕೊಡಗಿನಲ್ಲಿ ಭಾರೀ ಸುದ್ದಿಗೆ ಗ್ರಾಸವಾಗುತ್ತಿದೆ. ಈ ಕಾರ್ಮಿಕರ ಮೂಲ ಯಾವದು, ಇವರು ಹೊಂದಿರುವ ದಾಖಲೆಗಳು ಅಧಿಕೃತವೋ - ಅನಧಿಕೃತವೋ ಎಂಬ ಬಗ್ಗೆ ಚರ್ಚೆಗಳು ಮಾತ್ರವಲ್ಲದೆ, ಜಿಲ್ಲೆಯ ಆಂತರಿಕ ಭದ್ರತೆಯ ವಿಚಾರದಲ್ಲೂ ಇದು ಒಂದಷ್ಟು ಆತಂಕವನ್ನು ಸೃಷ್ಟಿಸುತ್ತಿದೆ. ಕೇವಲ ಕಾಫಿ ತೋಟದ ಕೆಲಸ ಕಾರ್ಯಗಳು ಮಾತ್ರವಲ್ಲ, ಕಟ್ಟಡ ಕಾಮಗಾರಿಗಳು, ಹೊಟೇಲ್, ರೆಸಾರ್ಟ್ಗಳಲ್ಲಿನ ವಿವಿಧ ಕೆಲಸಗಳು ಸೇರಿದಂತೆ ಬಹುತೇಕ ಕಾಮಗಾರಿಗಳಲ್ಲಿ ಕರ್ನಾಟಕ ರಾಜ್ಯದ ಕಾರ್ಮಿಕರಿಗಿಂತ ಈಗೀಗ ಉತ್ತರ ಭಾರತದ ಮುಖಗಳೇ ಕಂಡು ಬರುತ್ತಿವೆ.
ಪ್ರಸ್ತುತದ ಆತಂಕಕಾರಿ ವಿಚಾರವೆಂದರೆ ಈ ರೀತಿಯಾಗಿ ಕೊಡಗಿಗೆ ಆಗಮಿಸುತ್ತಿರುವ ಕಾರ್ಮಿಕರು ಜಿಲ್ಲೆಯಲ್ಲಿ ಕೆಲಸ - ಕಾರ್ಯಗಳನ್ನು ಮುಗಿಸಿ ಮತ್ತೆ ತಮ್ಮೂರಿನತ್ತ ತೆರಳದೆ ಜಿಲ್ಲೆಯಲ್ಲೇ ನೆಲೆ ಕಾಣುತ್ತಿರುವುದು ಗಂಭೀರ ವಿಚಾರವಾಗಿದೆ. ಕೂಲಿ - ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂದಿ ಇದೀಗ ಅಲ್ಲಲ್ಲಿ ಕೆಲವಾರು ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಯಾವದೇ ಸೂಕ್ತ ಹಿನ್ನೆಲೆ - ವಿವರ ಮಾಹಿತಿಗಳು ಇಲ್ಲದ ಈ ಮಂದಿ ಜಿಲ್ಲೆಯ ಕೆಲವು ಮಾರುಕಟ್ಟೆಗಳಲ್ಲೂ ವ್ಯಾಪಾರಕ್ಕೆ ಇಳಿಯುವಷ್ಟು ಪ್ರಭಾವ ಹೊಂದಿದ್ದಾರೆ. ಈಗಾಗಲೇ, ಗೋಣಿಕೊಪ್ಪಲು, ವೀರಾಜಪೇಟೆಗಳಲ್ಲಿ ಇಂತಹ ವ್ಯಾಪಾರಸ್ತರನ್ನು ಅಲ್ಲಿನ ಪಂಚಾಯಿತಿ ಆಡಳಿತ ತೆರವುಗೊಳಿಸಿರುವ ಘಟನೆಗಳೂ ನಡೆದಿವೆ.
ಇಲ್ಲಿ ಆಗಬೇಕಿರುವದಾದರೂ ಏನು...?
ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಬದುಕು ಕಂಡುಕೊಳ್ಳಬಹುದಾಗಿದೆಯಾದರೂ ಇಂತಹ ಹೊಸ ಮುಖಗಳ ಬಗ್ಗೆ ಕೊಡಗಿನಾದ್ಯಂತ ಕೆಲವಾರು ಸಂಶಯಗಳು ಇರುವದರಿಂದ ಭದ್ರತೆಯ ದೃಷ್ಟಿಯಿಂದ ಒಂದಷ್ಟು ಮುಂಜಾಗ್ರತೆ ಅತ್ಯಗತ್ಯವಾಗಿದೆ. ಈಗಾಗಲೇ ಕೆಲವು ಕಾರ್ಮಿಕರು ಕೇವಲ ಉತ್ತರ ಭಾರತದ ರಾಜ್ಯದವರು ಮಾತ್ರವಲ್ಲ, ಇವರ ಸೋಗಿನಲ್ಲಿ ರೋಹಿಂಗ್ಯಾಗಳು, ಬಾಂಗ್ಲಾದೇಶೀಯರೂ ಇಲ್ಲಿ ನೆಲೆ ಕಾಣುತ್ತಿದ್ದಾರೆ ಎಂಬ ಆರೋಪಗಳು - ಆತಂಕಗಳು ಸೃಷ್ಟಿಯಾಗಿವೆ.
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆಯೊಂದಿಗೆ ಒಂದಷ್ಟು ಗೊಂದಲಗಳು ಇರುವುದರಿಂದಾಗಿ ಜಿಲ್ಲೆಯ ಬೆಳೆಗಾರರಿಗೆ ಇತರ ಉದ್ದಿಮೆದಾರರು, ಮನೆ, ಕಟ್ಟಡ ನಿರ್ಮಿಸುವವರಿಗೆ ಕಾರ್ಮಿಕರ ಅವಶ್ಯಕತೆಗಳು ಇದೆ ಎಂಬದನ್ನು ಅಲ್ಲಗೆಳೆಯಲಾಗದು. ಆದರೆ ಪೂರ್ತಿಯಾಗಿ ಗೊತ್ತು - ಗುರಿಯಿಲ್ಲದೆ ಹೊಸ ಮುಖಗಳು ಸಾವಿರಾರು ಸಂಖ್ಯೆಯಲ್ಲಿ ದಿನಂಪ್ರತಿ ತಂಡೋಪ ತಂಡವಾಗಿ ಕೊಡಗಿಗೆ ಲಗ್ಗೆಯಿಡುತ್ತಿರುವದು ಭವಿಷ್ಯದ ದೃಷ್ಟಿಯಿಂದಲೂ ಸೂಕ್ಷö್ಮವಾಗಿದೆ.
ಪೊಲೀಸ್ ಇಲಾಖೆ ಇಂತಹ ಕಾರ್ಮಿಕರ ಬಗ್ಗೆ ಸೂಕ್ತ ವಿವರಗಳನ್ನು ನೀಡುವಂತೆ ಸೂಚನೆ ನೀಡುತ್ತಿದ್ದರೂ ಇದನ್ನು ಕೆಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜಿಲ್ಲೆಯಲ್ಲಿ ಆಂತರಿಕ ಭದ್ರತಾ ವಿಭಾಗಕ್ಕೆ
(ಮೊದಲ ಪುಟದಿಂದ) ದಾಖಲಿಸಲ್ಪಟ್ಟಿರುವ ಇಂತಹ ಕಾರ್ಮಿಕರ ಸಂಖ್ಯೆ ಈಗಲೂ ಕೇವಲ ಒಂದು ಸಾವಿರದ ಒಳಗಿದೆ. ಆದರೆ ಜಿಲ್ಲೆಯಾದ್ಯಂತ ಕಂಡು ಬರುತ್ತಿರುವ ಬೆಳವಣಿಗೆಗಳನ್ನು ಅವಲೋಕಿಸಿದರೆ ಇವರ ಸಂಖ್ಯೆ ಕನಿಷ್ಟ ೧೫ ರಿಂದ ೨೦ ಸಾವಿರಕ್ಕೂ ಮಿಗಿಲಾಗಿದೆ. ಇವರು ಹೊಂದಿರುವ ಆಧಾರ್ಕಾರ್ಡ್ ಮತದಾರರ ಗುರುತಿನ ಚೀಟಿಯನ್ನು ಸಂಬAಧಿಸಿ ದವರು ಸಂಗ್ರಹಿಸಿ ಇಟ್ಟು ಕೊಂಡರೆ ಮಾತ್ರ ಸಾಲದು. ನಕಲಿ ದಾಖಲಾತಿಗಳ ಆರೋಪ - ಸಂಶಯಗಳು ಇರುವುದರಿಂದ ಈ ದಾಖಲೆಗಳ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ - ಗೃಹ ಇಲಾಖೆ ಅಲ್ಲಿನ ರಾಜ್ಯದೊಂದಿಗೆ ವ್ಯವಹರಿಸಿ ಖಚಿತಪಡಿಸಿಕೊಳ್ಳಲೇ ಬೇಕಾಗಿದೆ. ಆಯಾ ಪಂಚಾಯಿತಿ ವ್ಯಾಪ್ತಿಗಳಲ್ಲೂ ಈ ಬಗ್ಗೆ ಗಂಭೀರ ವಾದ ಗಮನ ಹರಿಸಬೇಕಾಗಿದೆ.
ಈಗಾಗಲೇ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ವಲಸಿಗ ಕಾರ್ಮಿಕರ ಮೂಲದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲು ಗೃಹ ಸಚಿವರಿಗೆ ಮನವಿ ಸಲ್ಲಿಸುವ ಕುರಿತಾಗಿಯೂ ಪ್ರಸ್ತಾಪಿಸಿದ್ದಾರೆ. ಮುಂದಾಲೋಚನೆಯಿಲ್ಲದೆ ತಮ್ಮ ಕೆಲಸ ಮುಗಿದರೆ ಸಾಕೆಂದು ಜಿಲ್ಲೆಯ ಖಾಯಂ ನಿವಾಸಿಗಳು ಈ ರೀತಿಯಾಗಿ ಆಶ್ರಯ ಕಲ್ಪಿಸುತ್ತಾ ಹೋದಲ್ಲಿ ಮುಂದೊAದು ದಿನ ಗಂಭೀರ ಪರಿಣಾಮ ಖಚಿತ ಎಂಬದು ಹಲವು ಹಿತಚಿಂತಕರ ಮಾತಾಗಿದೆ. ಇದಲ್ಲದೆ ಓಲೈಕೆ ರಾಜಕಾರಣ ಮಾಡುವವರು ಮೂಲ ನಿವಾಸಿಗಳು ಹಾಗೂ ದೇಶದ, ಜಿಲ್ಲೆಯ ಭದ್ರತೆಯ ಬಗ್ಗೆ ಗಮನ ಹರಿಸಿ ವಲಸಿಗರ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂಬ ಮಾತನ್ನೂ ಶಾಸಕ ಬೋಪಯ್ಯ ಅವರು ಒತ್ತಿ ಹೇಳಿದ್ದಾರೆ. ಈ ಬಗ್ಗೆಯೂ ಗಮನ ಅಗತ್ಯವಾಗಿದೆ.
ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಂತಹ ಕಾರ್ಮಿಕರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ವಲಸಿಗರಿಗೆ ಪಂಚಾಯಿತಿ ಅಥವಾ ಪೊಲೀಸ್ ಇಲಾಖೆಯ ಮೂಲಕ ತಾತ್ಕಾಲಿಕವಾದ ಗುರುತಿನ ಚೀಟಿಯನ್ನು ನೀಡಿದಲ್ಲಿ ಇದು ಒಂದಷ್ಟು ಸುಧಾರಣೆಯಾಗಬಹುದು. ಇಂತಹ ನಿಯಮಗಳು ಬಂದು ಹೋಗುವ ಮಂದಿಗೆ ಹಲವೆಡೆ ಇದೆ ಎಂಬದನ್ನೂ ಅರಿಯಬೇಕಿದೆ.
ಕೇವಲ ಐದೂವರೆಯಿಂದ ಆರು ಲಕ್ಷದಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿರುವ ಜಿಲ್ಲೆಯಲ್ಲಿ ಇದೇನೂ ಅಸಾಧ್ಯದ ವಿಚಾರವಲ್ಲ. ಎಲ್ಲರ ಸ್ಪಂದನೆಯೂ ಇದಕ್ಕೆ ಅಗತ್ಯವಾಗಿದೆ. ಈ ವಿಚಾರದಲ್ಲಿ ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸದ್ಯದ ಪರಿಸ್ಥಿತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.