ಸೋಮವಾರಪೇಟೆ,ಅ.೧೬: ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚರಂಡಿ ನೀರು ಮನೆ ಸಮೀಪವೇ ಹರಿದು, ಗೋಡೆಗಳು ಶೀತಗೊಂಡು ವಾಸದ ಮನೆ ಸಂಪೂರ್ಣವಾಗಿ ಧರಾಶಾಹಿಯಾದ ಘಟನೆ ಮುಂಜಾನೆ ೩.೪೫ಕ್ಕೆ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿಗೆ ಸಮೀಪದ ಬೇಳೂರು ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ವಿರಕ್ತ ಮಠಕ್ಕೆ ಸೇರಿದ ಜಾಗದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಮುತ್ತಮ್ಮ ಅವರ ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದು, ಕುಟುಂಬ ಕಂಗಾಲಾಗಿದೆ.
ನಿನ್ನೆ ಸಂಜೆ ಹಾಗೂ ರಾತ್ರಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಬೇಳೂರು-ಕರ್ಕಳ್ಳಿ ರಸ್ತೆಯ ಮೂಲಕ ಹರಿದ ಮಳೆ ನೀರು, ಮುತ್ತಮ್ಮ ಅವರ ಮನೆಯ ಗೋಡೆಯತ್ತ ನುಗ್ಗಿದ ಪರಿಣಾಮ, ಗೋಡೆ ಶೀತಗೊಂಡು ಕುಸಿದು ಬಿದ್ದಿದೆ.
ಮುತ್ತಮ್ಮ ಅವರು ತನ್ನ ಮಗಳ ಮನೆಗೆ ತೆರಳಿದ್ದು, ಮನೆಯಲ್ಲಿ ಮಗ ಶೇಷಪ್ಪ ಮಲಗಿದ್ದ. ಮತ್ತೋರ್ವ ಪುತ್ರ ಮಡಿಕೇರಿಗೆ ತೆರಳಿದ್ದ. ಮನೆಯಲ್ಲಿ ಮಲಗಿದ್ದ ಶೇಷಪ್ಪ, ರಾತ್ರಿ ವೇಳೆ ಎಚ್ಚರಗೊಂಡಿದ್ದು, ಇದೇ ಸಂದರ್ಭ ಮನೆಯ ಗೋಡೆ ಸಹಿತ ಛಾವಣಿ ಕುಸಿದು ಬಿದ್ದಿದೆ. ಘಟನೆಯಿಂದ ಆಘಾತಗೊಂಡ ಶೇಷಪ್ಪ, ಬಾಗಿಲಿನತ್ತ ದೌಡಾಯಿಸಿದ ಸಂದರ್ಭ ಛಾವಣಿಯ ಮರ ಹಾಗೂ ಗೋಡೆಯ ಇಟ್ಟಿಗೆ ಸೊಂಟದ ಭಾಗಕ್ಕೆ ಅಪ್ಪಳಿಸಿದೆ. ಘಟನೆಯಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಾಸದ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ವಾಸಕ್ಕೆ ಅಯೋಗ್ಯವಾಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯೆ ಮೋಹಿನಿ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ತಕ್ಷಣ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದು, ತಹಶೀಲ್ದಾರ್ ಗೋವಿಂದರಾಜು ಅವರು ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.