ಕುಶಾಲನಗರ, ಅ. ೧೬: ಕರ್ನಾಟಕ ಡ್ರೆöÊವರ್ಸ್ ಮತ್ತು ಓನರ್ಸ್ ವೆಲ್ಫೇರ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಚಾಲಕರ ಜಾಗೃತಿ ಸಭೆ ಕುಶಾಲನಗರ ಬೈಚನಹಳ್ಳಿಯಲ್ಲಿ ನಡೆಯಿತು.
ಜಾಗೃತಿ ಸಭೆಯನ್ನು ಉದ್ಘಾಟಿಸಿದ ಅಸೋಸಿಯೇಷನ್ ಸಂಸ್ಥಾಪಕ ಸುಗಟೂರು ಮಂಜುನಾಥ್ ಮಾತನಾಡಿ, ರಕ್ತದಾನಿ ಚಾಲಕರನ್ನು ಸೇರಿಸಿ ಸಮಾಜಮುಖಿಯಾಗಿ ತೊಡಗಿಸಿಕೊಂಡ ಸಂಘಟನೆ ಇದೀಗ ೧೬ ಸಾವಿರ ಜನರ ಸಂಘಟನೆಯಾಗಿ ಬೆಳೆದಿದೆ. ರಕ್ತದಾನದ ಮೂಲಕ ನಶೆ ಮುಕ್ತ ಚಾಲಕ ವರ್ಗ ನಿರ್ಮಾಣ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಚಾಲಕರು ಜಾಗೃತರಾಗದ ಹೊರತು ಶೋಷಣೆ ತಪ್ಪುವುದಿಲ್ಲ. ಯೋಜನೆಗಳನ್ನು ಚಾಲಕರಿಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಸೌಲಭ್ಯಗಳು ಕೂಡ ಪೂರ್ಣ ಪ್ರಮಾಣದಲ್ಲಿ ಚಾಲಕರ ಕುಟುಂಬಕ್ಕೆ ಲಭಿಸುತ್ತಿಲ್ಲ ಎಂದು ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ. ಈ ನಿಟ್ಟಿನಲ್ಲಿ ಸಂಘ ಸ್ಥಾಪಿಸಿ ಚಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭ ಅಸೋಸಿಯೇಷನ್ ಪ್ರಮುಖರಾದ ಕುಶಾಲನಗರದ ಚಂದ್ರು, ಬಸವ, ಯೋಗೀಶ್ ಕುಶಾಲನಗರ ಪ.ಪಂ. ಸದಸ್ಯ ಬಿ.ಎಲ್. ಜಗದೀಶ್ ಇದ್ದರು.