ಸೋಮವಾರಪೇಟೆ,ಅ.೧೬: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ೪ ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸುತ್ತಿದ್ದ ಡಯಾಲಿಸಿಸ್ ಘಟಕ ಸದ್ಯಕ್ಕೆ ಸ್ಥಗಿತಗೊಂಡಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

ಡಯಾಲಿಸಿಸ್ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿAದ ಕಳೆದ ೧೦ ದಿನಗಳಿಂದ ಘಟಕ ಸ್ತಬ್ಧಗೊಂಡಿದ್ದು, ಇದರ ಪ್ರಯೋಜನ ಪಡೆಯುತ್ತಿದ್ದ ರೋಗಿಗಳು ಮಡಿಕೇರಿಯ ಜಿಲ್ಲಾಸ್ಪತ್ರೆ ಹಾಗೂ ಸಾವಿರಾರು ರೂಪಾಯಿ ವ್ಯಯಿಸಿ ಖಾಸಗಿ ಆಸ್ಪತ್ರೆಗೆಗಳಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರಪೇಟೆಯ ಡಯಾಲಿಸಿಸ್ ಘಟಕದಲ್ಲಿ ವಾರದಲ್ಲಿ ೨೦ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿತ್ತು. ಇದೀಗ ಕಳೆದ ೧೦ ದಿನಗಳಿಂದ ತಾಂತ್ರಿಕ ಸಮಸ್ಯೆಗೆ ಒಳಗಾಗಿ ಕೆಲಸ ಸ್ಥಗಿತಗೊಂಡಿರುವುದರಿAದ ಬಡ ರೋಗಿಗಳು ಹೆಚ್ಚಿನ ಸಮಸ್ಯೆಗೆ ಸಿಲುಕುವಂತಾಗಿದೆ.

ಪ್ರತಿ ದಿನ ಒಂದು ಪಾಳಿಯಲ್ಲಿ ಮೂವರು ರೋಗಿಗಳಂತೆ ದಿನಕ್ಕೆ ೩ ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ರೋಗಿಗಳಿಗೆ ವರದಾನವಾಗಿತ್ತು. ಕಳೆದ ೧೦ ದಿನಗಳಿಂದ ಘಟಕದ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬAದಿದ್ದು, ಇಂದಿಗೂ ಸರಿಪಡಿಸದ ಹಿನ್ನೆಲೆ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಮಡಿಕೇರಿ, ಮೈಸೂರಿಗೆ ತೆರಳಬೇಕಿದ್ದು, ಕೆಲವರು ಬಡತನದ ನಡುವೆಯೂ ಸಾವಿರಾರು ರೂಪಾಯಿ ವ್ಯಯಿಸಿ ಜೀವ ಉಳಿಸಿಕೊಳ್ಳುವ ಸಲುವಾಗಿ ಖಾಸಗಿ ಆಸ್ಪತ್ರೆಗಳ ಕದ ತಟ್ಟುವಂತಾಗಿದೆ.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇರವಾಗಿ ಕರ್ನಾಟಕ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧೀನಕ್ಕೆ ಒಳಪಟ್ಟಿದೆ. ಕಳೆದ ೪ ವರ್ಷಗಳ ಹಿಂದೆ ಬಿ.ಆರ್.ಎಸ್. ಸಂಸ್ಥೆಯವರು ಡಯಾಲಿಸಿಸ್ ಘಟಕವನ್ನು ವಾರ್ಷಿಕ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು, ಯಂತ್ರೋಪಕರಣ ಸೇರಿದಂತೆ ಇತರ ಸವಲತ್ತುಗಳಿಗೆ ಸರ್ಕಾರವೇ ಅನುದಾನ ಕಲ್ಪಿಸಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಟ್ಟಡ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನಷ್ಟೇ ಒದಗಿಸಲಾಗಿದ್ದು, ಉಳಿದಂತೆ ಎಲ್ಲಾ ಸೌಕರ್ಯಗಳನ್ನು ಬಿಆರ್‌ಎಸ್ ಸಂಸ್ಥೆಯವರೇ ಅಳವಡಿಸಿದ್ದಾರೆ. ಇತ್ತೀಚೆಗೆ ಈ ಸಂಸ್ಥೆ ಪಡೆದಿದ್ದ ಗುತ್ತಿಗೆ ಅವಧಿ ಮುಗಿದಿದ್ದು, ಸದ್ಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಹಾಗೂ ಒಂದಿಬ್ಬರು ಸಿಬ್ಬಂದಿಗಳಿದ್ದಾರೆ. ಈ ನಡುವೆ ಕಳೆದ ೧೦ ದಿನಗಳ ಹಿಂದೆ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬAದಿದ್ದು, ಆರ್.ಓ. ಪ್ಲಾಂಟ್‌ನಲ್ಲಿನ ತೊಂದರೆಯಿAದಾಗಿ ಘಟಕ ಕಾರ್ಯಾರಂಭಿಸುತ್ತಿಲ್ಲ. ಪರಿಣಾಮ ರೋಗಿಗಳಿಗೆ ಅನಾನುಕೂಲವಾಗುತ್ತಿದೆ.

ಡಯಾಲಿಸಿಸ್ ಘಟಕದ ದುರಸ್ತಿಗೆ ನುರಿತ ತಂತ್ರಜ್ಞರು ಲಭ್ಯವಾಗದ ಹಿನ್ನೆಲೆ ೧೦ ದಿನಗಳಿಂದ ಘಟಕ ಸ್ತಬ್ಧವಾಗಿದೆ. ಬಾಗಲಕೋಟೆಯಿಂದ ತಂತ್ರಜ್ಞರು ಆಗಮಿಸುವ ಭರವಸೆ ನೀಡಿದ್ದರೂ ಈವರೆಗೆ ಬಂದಿಲ್ಲ. ಇದೀಗ ಮೈಸೂರಿನ ತಂತ್ರಜ್ಞರನ್ನು ಸಂಪರ್ಕಿಸಲಾಗಿದ್ದು, ಸೋಮವಾರ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರನ್ನು ‘ಶಕ್ತಿ’ ಸಂಪರ್ಕಿಸಿ ಮಾಹಿತಿ ಪಡೆದ ಸಂದರ್ಭ ಪ್ರತಿಕ್ರಿಯಿಸಿದ ಶಾಸಕರು, ಡಯಾಲಿಸಿಸ್ ಘಟಕದ ಸಮಸ್ಯೆ ತನ್ನ ಗಮನಕ್ಕೆ ಬಂದಿದ್ದು, ಈಗಾಗಲೇ ಸಂಬAಧಿಸಿದವರೊAದಿಗೆ ಮಾತುಕತೆ ನಡೆಸಲಾಗಿದೆ. ತುರ್ತು ಸನ್ನಿವೇಶ ನಿರ್ಮಾಣವಾಗಿರುವ ಹಿನ್ನೆಲೆ ತಕ್ಷಣಕ್ಕೆ ದುರಸ್ತಿ ಕಾರ್ಯ ಕೈಗೊಳ್ಳಲು ತಾನೇ ಹಣ ನೀಡುವುದಾಗಿ ತಿಳಿಸಿದ್ದೇನೆ. ತಾ. ೧೮ರಂದು ಮೈಸೂರಿನಿಂದ ತಂತ್ರಜ್ಞರು ಆಗಮಿಸಲಿದ್ದು, ಪರಿಶೀಲನೆ ನಡೆಸಲಿದ್ದಾರೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿ, ರೋಗಿಗಳ ಸೇವೆಗೆ ಘಟಕವನ್ನು ಒದಗಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.

-ವಿಜಯ್