*ವೀರಾಜಪೇಟೆ, ಅ. ೧೬: ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆ ಇದೀಗ ನಗರದ ಕಡೆ ಹೆಜ್ಜೆ ಹಾಕುತ್ತಿದೆ. ವೀರಾಜಪೇಟೆ ನೆಹರು ನಗರಕ್ಕೆ ಶುಕ್ರವಾರ ಸಂಜೆ ಒಂಟಿ ಸಲಗವೊಂದು ಬಂದು ದಾಂಧಲೆ ಎಬ್ಬಿಸಿ ಹೋಗಿದೆ.

ಸಂಜೆ ಆರು ಗಂಟೆ ಸುಮಾರಿಗೆ ಆನೆಯೊಂದು ನೆಹರು ನಗರಕ್ಕೆ ಬಂದು ಆಟೋ ಚಾಲಕ ಶಂಕರ್ ಅವರ ಮನೆಯ ಬಳಿ ಅವರ ಮನೆಯ ಶೀಟ್ ಎಳೆದು ಹಾಕಿ, ಮರದ ಗೇಟು ಮುರಿದು, ಹಲಸಿನ ಮರದಲ್ಲಿ ಹಲಸಿನಹಣ್ಣಿಗಾಗಿ ಹುಡುಕಾಟ ನಡೆಸಿ ಮರದ ಕೊಂಬೆಗಳನ್ನೆಲ್ಲಾ ಎಳೆದಾಡಿದೆ. ಶಂಕರ್ ಅವರ ಪತ್ನಿ ಮನೆಯಲ್ಲಿ ಟಿವಿ ವೀಕ್ಷಣೆ ಮಾಡುತ್ತಲ್ಲಿದ್ದರಿಂದ ಆನೆಯ ದಾಂಧಲೆ ಕೇಳಿರಲಿಲ್ಲ. ಟಿವಿ ಆಫ್ ಮಾಡಿದ ಬಳಿಕ ಆನೆ ಒಮ್ಮೆ ಜೋರಾಗಿ ಘೀಳಿಟ್ಟಿದೆ. ಸದ್ದಿಗೆ ಬೆದರಿ ಶಂಕರ್‌ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಸುಮಾರು ಎರಡರಿಂದ ಮೂರು ಗಂಟೆ ಸಮಯ ಆನೆ ಅವರ ಮನೆಯ ಬಳಿಯೇ ಸುಳಿದಾಡಿದೆ. ಬಳಿಕ ಶಂಕರ್ ಪ.ಪಂ. ಸದಸ್ಯ ಅಗಸ್ಟಿನ್ ಬೆನ್ನಿ ಹಾಗೂ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇವೆಲ್ಲದರ ನಡುವೆ ಒಂಟಿಸಲಗ ಮಾತ್ರ ಮನೆಯ ಗೋಡೆಗೆ ಒರಗಿಕೊಂಡಿತ್ತು. ಕೊನೆಗೆ ಸ್ಥಳೀಯ ಯುವಕರು ಎಲ್ಲರೂ ಸೇರಿ ಆನೆಯ ಕಡೆ ಟಾರ್ಚ್ ಬೆಳಕು ಬಿಟ್ಟ ಬಳಿಕ ಆನೆ ಮರೆಯಾಗಿದೆ.

ಆನೆಹೋದ ಮೇಲೆ ಬಂದ ಅರಣ್ಯ ಇಲಾಖೆ ಆಗಮಿಸಿ ಆನೆ ಬಂದಲ್ಲಿ ಪಟಾಕಿ ಹೊಡೆಯಿರಿ ಎಂದು ಸಲಹೆ ನೀಡಿ ತೆರಳಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುವ ಜಾಗದಲ್ಲಿ ಆನೆಗಳು ಬಂದಿರುವುದು ಆತಂಕಕಾರಿ ಬೆಳವಣಿಗೆ. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಮಾಡಬೇಕು ಎಂದು ಪ.ಪಂ. ಸದಸ್ಯ ಅಗಸ್ಟಿನ್ ಬೆನ್ನಿ ಆಗ್ರಹಿಸಿದ್ದಾರೆ. -ಉಷಾ ಪ್ರೀತಂ