ಕುಶಾಲನಗರ, ಅ. ೧೫: ಕುಶಾಲನಗರ ನೂತನ ತಾಲೂಕು ಕಚೇರಿಯನ್ನು ತಕ್ಷಣ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಜನರ ಸಮಸ್ಯೆಯನ್ನು ನೀಗಿಸುವಂತೆ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಕ್ತಿ’ಯಲ್ಲಿ ಈ ಬಗ್ಗೆ ಪ್ರಕಟಗೊಂಡ ವಿಶೇಷ ವರದಿಗೆ ಪ್ರತಿಕ್ರಿಯಿಸಿದ್ದು ಕಳೆದ ಹಲವು ತಿಂಗಳ ಹಿಂದೆ ತಾಲೂಕು ಘೋಷಣೆಯಾಗಿ ಇದುವರೆಗೂ ತಾಲೂಕು ಕಚೇರಿ ಸಂಪೂರ್ಣವಾಗಿ ಕಾರ್ಯ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಾಲೂಕು ತಹಶೀಲ್ದಾರರು ಹೋಬಳಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಮರ್ಪಕವಾಗಿ ಜನಸಾಮಾನ್ಯರಿಗೆ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರ ಆರ್‌ಎಂಸಿ ಆವರಣದಲ್ಲಿ ಕೆಲವು ತಿಂಗಳ ಹಿಂದೆ ರಾಜ್ಯ ಕಂದಾಯ ಸಚಿವರು ಹಾಗೂ ಕ್ಷೇತ್ರದ ಶಾಸಕರು ಜಿಲ್ಲಾ ಅಧಿಕಾರಿಗಳು ತಾಲೂಕನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ನಂತರ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಕುಶಾಲನಗರ ನೂತನ ತಾಲೂಕಿಗೆ ಸಂಬAಧಿಸಿದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕಡತಗಳು ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿದ್ದು ಅದನ್ನು ತಕ್ಷಣ ಕುಶಾಲನಗರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಬೇಕು. ಆ ಮೂಲಕ ಅಗತ್ಯ ದಾಖಲೆಗಳನ್ನು ಪಡೆಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ತುಂಬಾ ಅನಾನುಕೂಲವಾಗುತ್ತದೆ ಎಂದಿದ್ದಾರೆ.

ತಕ್ಷಣ ಕುಶಾಲನಗರ ನೂತನ ತಾಲೂಕು ತಹಶೀಲ್ದಾರ್ ಕಚೇರಿ ಆರಂಭಗೊಳ್ಳದಿದ್ದಲ್ಲಿ ಕರ್ನಾಟಕ ಕಾವಲುಪಡೆ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆ ಜತೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭ ಕರ್ನಾಟಕ ಕಾವಲು ಪಡೆಯ ಪ್ರಮುಖರಾದ ಇಂದಿರಾ, ಶಮಿ, ಮಹಮ್ಮದ್ ಇದ್ದರು.