ವೀರಾಜಪೇಟೆ, ಅ. ೧೫: ಸೂಕ್ತ ಕಾನೂನು ಮಾಹಿತಿ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ. ಆದರೂ ಕನಿಷ್ಟ ಪ್ರತಿ ದಿನಕ್ಕೆ ಅನಿವಾರ್ಯವಾಗಿರುವ ವಿಷಯ ತಿಳಿದುಕೊಳ್ಳಬೇಕಾಗಿರುವುದು ಅವಶ್ಯಕ ಎಂದು ವೀರಾಜಪೇಟೆ ಅಪರ ಸಿವಿಲ್ ನ್ಯಾಯಾಧೀಶೆ ಸಿ. ಮಹಾಲಕ್ಷಿ÷್ಮ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ವಕೀಲರ ಸಂಘ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ಕಾನೂನು ಅರಿವು" ಹಾಗೂ "ಕೋವಿಡ್-೧೯ ಲಸಿಕಾ ಅಭಿಯಾನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಕುರಿತು ಕಾನೂನುಗಳ ಅರಿವಿನ ವಿಚಾರವಾಗಿ ಸವಿಸ್ತಾರವಾದ ಮಾಹಿತಿ ನೀಡಿ, ನಾವು ತಿಳಿಯಬೇಕಾದ ಕಾನೂನು ಮಾಹಿತಿಗಳು, ವಾಹನ ಚಲಾಯಿಸುವಾಗ, ಗ್ರಾಹಕರಾಗಿ ವಸ್ತುಗಳನ್ನು ಖರೀದಿಸುವಾಗ, ನಾವು ನಿತ್ಯ ಜೀವನದಲ್ಲಿ ಅರಿಯಬೇಕಾದ ಕಾನೂನು ಮಾಹಿತಿ ತಿಳಿಸಿಕೊಟ್ಟರು.
ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಕೋವಿಡ್-೧೯ ಲಸಿಕಾ ಅಭಿಯಾನ ಕುರಿತಾಗಿ ಉಪನ್ಯಾಸ ನೀಡಿದರು. ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಕೆ.ಆರ್. ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಬಿಆರ್‌ಪಿ ಗೀತಾಂಜಲಿ, ಸಿಆರ್‌ಪಿ ವೆಂಕಟೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ನೀತ ಕುಮಾರಿ ಸ್ವಾಗತಿಸಿದರೆ, ನಳಿನಿ ನಿರೂಪಿಸಿದರು. ಪ್ರತಿಕಾ ವಂದಿಸಿದರು.