ಮಡಿಕೇರಿ, ಅ. ೧೫: ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಯಾಗಿ ಚಾರುಲತಾ ಸೋಮಲ್ ಅವರು ನಿಯುಕ್ತಿ ಗೊಂಡು ಕೇವಲ ಏಳೇ ತಿಂಗಳಿನಲ್ಲೇ ಇವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಸರಕಾರದ ಆದೇಶ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಎಂಬದು ಸಹಜ ಪ್ರಕ್ರಿಯೆ ಆದರೂ ಜಿಲ್ಲೆಯಲ್ಲಿನ ಈ ಪರಿಸ್ಥಿತಿ ಇದಕ್ಕೆ ಸರಿಯಾಗಿದೆಯೇ ಎಂಬದು ಹಲವರ ಪ್ರಶ್ನೆಯಾಗಿದೆ. ಅದರಲ್ಲೂ ದಸರಾ ಉತ್ಸವ ಹಾಗೂ ತಲಕಾವೇರಿ ಜಾತ್ರೆಯ ಬಿರುಸಿನ ಪರಿಸ್ಥಿತಿಯ ಸಂದರ್ಭದಲ್ಲೇ ಇವರ ವರ್ಗಾವಣೆಯ ಆದೇಶವಾಗಿರುವದು ಇದಕ್ಕೆ ಕಾರಣವಾಗಿದೆ.
ಇದೀಗ ತುಲಾ ಸಂಕ್ರಮಣ ಜಾತ್ರೆಯತನಕವೂ ಚಾರುಲತಾ ಅವರನ್ನು ಮುಂದುವರಿಯುವAತೆ ಮೇಲ್ಮಟ್ಟದಿಂದ ಸಂದೇಶವೊAದು ಬಂದಿರುವುದಾಗಿ ತಿಳಿದು ಬಂದಿದೆ. ಇದಾದ ಬಳಿಕ ಮತ್ತೆ ಈಗಿನ ಆದೇಶ ಬದಲಾವಣೆಯಾಗಲಿದೆಯೇ ಎಂಬದೂ ಇದೀಗ ಚರ್ಚೆಯಲ್ಲಿದೆ. ಕೆಲವು ಮೂಲಗಳ ಪ್ರಕಾರ ಚಾರುಲತಾ ಸೋಮಲ್ ಮತ್ತೆ ಕೊಡಗಿನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ. ಇದರೊದಿಗೆ ಇವರ ಸ್ಥಾನಕ್ಕೆ ನಿಯೋಜಿಸಲ್ಪಟ್ಟಿದ್ದ ರಾಯಚೂರುವಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ. ಬಿ.ಸಿ. ಸತೀಶ್ ಅವರು ಕೊಡಗಿಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆಂಬ ಮಾತೂ ಕೇಳಿ ಬಂದಿದೆ. ಈ ವರ್ಗಾವಣೆಯ ಆದೇಶ ಪ್ರಸ್ತುತ ಇನ್ನೂ ಅಸ್ಪಷ್ಟತೆಯಲ್ಲಿದೆ.