ಗೋಣಿಕೊಪ್ಪಲು, ಅ.೧೫: ದ.ಕೊಡಗಿನ ವಿವಿಧ ಭಾಗಗಳಲ್ಲಿ ದಿನಕ್ಕೊಂದರAತೆ ಜಾನುವಾರುಗಳ ಮೇಲೆ ದಾಳಿ ಮಾಡಿ ಹಸು, ಕರುಗಳನ್ನು ತಿಂದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿರಾಯ ಇದೀಗ ಹಲವು ತಿಂಗಳ ಬಿಡುವಿನ ನಂತರ ಅರಣ್ಯ ಪ್ರದೇಶದಿಂದ ನಾಡಿನತ್ತ ಆಗಮಿಸಿ ತನ್ನ ಬೇಟೆಯನ್ನು ಮುಂದುವರಿಸಿದೆ.

ಬಾಳೆಲೆ ಹೋಬಳಿ ಬೆಸಗೂರು ಗ್ರಾಮದ ಎಚ್.ಬಿ.ಕುಶ ಎಂಬವರಿಗೆ ಸೇರಿದ ಹಸುವನ್ನು ಗದ್ದೆ ಬಯಲಿನಲ್ಲಿ ಮೇಯಲು ಬಿಟ್ಟಿದ್ದರು. ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಹುಲಿಯೊಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಮಧ್ಯಾಹ್ನ ವೇಳೆ ಮಾಲೀಕರು ಹಸುವಿಗೆ ನೀರು ಕೊಡಲು ತೆರಳಿದಾಗ ವಿಷಯ ಅರಿವಿಗೆ ಬಂದಿದೆ. ಕೂಡಲೇ ಗಾಬರಿಗೊಂಡ ಹಸುವಿನ ಮಾಲೀಕ ರೈತ ಸಂಘದ ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು ಅವರಿಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಪೊನ್ನಂಪೇಟೆ ವಲಯ ಅರಣ್ಯಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪರಿಹಾರ ಒದಗಿಸುವ ಭರವಸೆ ನೀಡಿದರು. ಹುಲಿಯ ಉಪಟಳದಿಂದ ತತ್ತರಿಸಿದ ದ.ಕೊಡಗಿನ ರೈತರು ಇದೀಗ ಮತ್ತೆ ಭಯ ಭೀತರಾಗಿದ್ದು ತಮ್ಮ, ತಮ್ಮ ಹಸು,ಕರುಗಳ ರಕ್ಷಣೆಯ ಬಗ್ಗೆ ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ. ರೈತ ಮುಖಂಡ ಚೊಟ್ಟೆಕಾಳಪಂಡ ಮನು, ಚಾರಿಮಂಡ ಗಿರೀಶ್, ಮಧು ಹಾಗೂ ಗ್ರಾಮಸ್ಥರು ಹುಲಿ ಸೆರೆಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

- ಹೆಚ್.ಕೆ.ಜಗದೀಶ್