ಮಡಿಕೇರಿ, ಅ. ೧೩: ಪ್ರಸ್ತುತ ಕಂಡುಬರುತ್ತಿರುವ ವಾತಾವರಣದ ಅಸಹಜತೆಯ ಪರಿಣಾಮವಾಗಿ ಒಂದು ರೀತಿಯಲ್ಲಿ ಇಡೀ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ. ಅಕ್ಟೋಬರ್ ತಿಂಗಳು ಬಹುತೇಕ ವಿವಿಧ ಹಬ್ಬಗಳ ಸಂಭ್ರಮದ ಮಾಸ ನವರಾತ್ರಿ, ಆಯುಧಪೂಜೆ, ವಿಜಯದಶಮಿ, ತುಲಾಸಂಕ್ರಮಣ ಹೀಗೆ ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಆದರೆ ಈ ಎಲ್ಲಾ ಸಂಭ್ರಮಗಳೂ ಪ್ರಸ್ತುತ ಮರೆಯಾದಂತಿವೆ.

ಮೊದಲೇ ಕೊರೊನಾ ಪರಿಸ್ಥಿತಿಯಿಂದಾಗಿ ಈತನಕ ಪರಿತಪಿಸುತ್ತಿದ್ದ ಜನರು ಇದೀಗ ಕೊರೊನಾ ಗಂಭೀರತೆ ತುಸು ಕಡಿಮೆಯಾಯಿತೆಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಕೊಡಗಿನಲ್ಲಿ ಮಳೆಗಾಲದ ಬವಣೆ ಇನ್ನೂ ಕಾಡಲಾರಂಭಿಸಿದೆ. ಬಹುತೇಕ ೨೦೨೧ರ ವರ್ಷವಿಡೀ ಕೊಡಗಿನ ಜನರು ಮಳೆಗಾಲದ ಸನ್ನಿವೇಶವನ್ನೇ ಎದುರಿಸುವಂತಾಗಿದೆ. ವರ್ಷಾರಂಭದಿAದಲೇ ಆಗಾಗ್ಗೆ ವಾತಾವರಣದಲ್ಲಿನ ಬದಲಾವಣೆಗಳು, ಎದುರಾದ ವಾಯುಭಾರ ಕುಸಿತದ ಪರಿಣಾಮ ಇದೀಗ ಅಕ್ಟೋಬರ್ ತಿಂಗಳ ಅರ್ಧಭಾಗ ತಲುಪಿದರೂ ಮುಗಿದಂತಿಲ್ಲ.

(ಮೊದಲ ಪುಟದಿಂದ) ಇದೀಗ ಬಂಗಾಳಕೊಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತವುಂಟಾಗಿದ್ದು, ಜಿಲ್ಲೆ ಅಕ್ಷರಶಃ ಮುಂಗಾರಿನ ಸಂದರ್ಭದ ಮಳೆಗಾಲವನ್ನು ನೆನಪಿಸುತ್ತಿದೆ.

ಇನ್ನೂ ಕೆಲವು ದಿನಗಳು ಇದೇ ಪರಿಸ್ಥಿತಿ ಮುಂದುವರಿಯಲಿರುವ ಕುರಿತು ಹವಾಮಾನ ಇಲಾಖೆಯ ಮಾಹಿತಿಗಳು ತಿಳಿಸಿವೆ. ಪ್ರಸ್ತುತ ಇಡೀ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದರೂ ಕೊಡಗಿನ ಪರಿಸ್ಥಿತಿ ಮಾತ್ರ ಇನ್ನಷ್ಟು ಕ್ಷಿಷ್ಟಕರವೆಂಬAತಾಗಿದೆ. ಬೇಸಿಗೆ ಅವಧಿಯಲ್ಲೂ ಮಳೆ, ಗಾಳಿ, ಚಳಿ... ಇದರೊಂದಿಗೆ ಶುರುವಿಟ್ಟುಕೊಂಡ ಮುಂಗಾರು ಮಳೆಯ ಸಮಯ... ಇದೀಗ ಮಳೆ ಕಡಿಮೆಯಾಗಿ ಬಿಸಿಲು ಕಾಣುವ ಸಮಯವಾಗಿದ್ದರೂ ಮತ್ತೆ ಅಸಹಜತೆಯ ವಾತಾವರಣ ಜಿಲ್ಲೆಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಇವೆಲ್ಲದರ ನಡುವೆ ಅಡುಗೆ ಅನಿಲ, ಪೆಟ್ರೋಲ್, ಡೀಸಲ್‌ನ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೂ ಸಮಸ್ಯೆ ಎದುರಿಸುತ್ತಿದ್ದ ಜನತೆಗೆ ಇದೀಗ ಮತ್ತೊಂದು ಸಮಸ್ಯೆಯೂ ಉಂಟಾಗುತ್ತಿದೆ. ಅಗತ್ಯ ತರಕಾರಿಗಳಾದ ಈರುಳ್ಳಿ, ಟೊಮೊಟೊ, ಆಲೂಗೆಡ್ಡೆಯಂತಹ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ವ್ಯಾಪಕ ಮಳೆಯಿಂದಾಗಿ ತರಕಾರಿ - ಕಾಳುಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಈ ಬೆಳೆಗಳು ಹಾನಿಗೀಡಾಗುತ್ತಿರುವದರಿಂದಾಗಿ ಇದಕ್ಕೆ ಅಭಾವ ಸೃಷ್ಟಿಯಾಗುತ್ತಿರುವದರೊಂದಿಗೆ ಬೆಲೆಯೂ ದುಪ್ಪಟ್ಟಾಗುತ್ತಿದೆ. ಕೆಲ ದಿನಗಳ ಹಿಂದೆ ರೂ. ೧೫ ರಿಂದ ೨೦ ರಷ್ಟಿದ್ದ ಟೊಮೊಟೊ ಬೆಲೆ ಇದೀಗ ರೂ. ೫೦ ದಾಟಿದೆ. ಅದರಂತೆ ಈರುಳ್ಳಿ ಬೆಲೆಯೂ ರೂ. ೩೫ ರಿಂದ ೪೦ಕ್ಕೆ ಏರಿದೆ. ಆಲೂಗೆಡ್ಡೆ ಮತ್ತಿತರ ವಸ್ತುಗಳ ಬೆಲೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ.

ಈ ಪರಿಸ್ಥಿತಿ ಒಂದೆಡೆಯಾದರೆ ಕೃಷಿ ಜಿಲ್ಲೆಯಾದ ಕೊಡಗಿನಲ್ಲೂ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತಿದೆ. ಈಗಾಗಲೇ ಹಣ್ಣಾಗುತ್ತಿರುವ ಅರೆಬಿಕಾ ಕಾಫಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದ್ದರೆ, ರೋಬಸ್ಟಾ ಕಾಫಿಯೂ ನೆಲಕಚ್ಚುತ್ತಿದೆ. ಕರಿಮೆಣಸು ಫಸಲಿಗೂ ಕೊಳೆರೋಗ ಬಾಧಿಸುತ್ತಿದೆ. ಕಿತ್ತಳೆ ಫಸಲೂ ಧರಾಶಾಹಿಯಾಗುತ್ತಿದೆ. ಕಾರ್ಮಿಕರಿಗೂ ತೋಟಗಳಲ್ಲಿ ಕೆಲಸಗಳು ಸಿಗದಂತಾಗುತ್ತಿದೆ.

ಇAತಹ ಸನ್ನಿವೇಶದಲ್ಲಿ ಎದುರಾಗಿರುವ ಆಯುಧಪೂಜೆ, ದಸರಾ ಬಗ್ಗೆಯೂ ಜನರಲ್ಲಿ ಹೆಚ್ಚು ಆಸಕ್ತಿ ಇಲ್ಲವಾಗಿದೆ. ಸಾಂಪ್ರದಾಯಿಕವಾದ ಕಾವೇರಿ ತೀರ್ಥೋದ್ಭವಕ್ಕೆ ತೆರಳಲೂ ಈಗಿನ ಪರಿಸ್ಥಿತಿ ಭಕ್ತಾದಿಗಳಿಗೆ ಅಡ್ಡಿಯಾಗುತ್ತಿದೆ. ಮಳೆ - ಚಳಿಯಿಂದ ಪರಿತಪಿಸುತ್ತಿರುವ ಜನರು ಶೀಘ್ರದಲ್ಲಿ ಬಿಸಿಲಿನ ವಾತಾವರಣ ಎದುರಾಗಲಿ ಎಂದು ಕಾಯುವಂತಾಗಿದೆ.