ಕಣಿವೆ, ಅ. ೧೩: ಕಳೆದ ಎರಡು ದಿನಗಳಿಂದ ಶುಂಠಿ ಬೆಲೆಯಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿದೆ. ಇದರಿಂದಾಗಿ ಸಹಜವಾಗಿ ಶುಂಠಿ ಬೆಳೆಗಾರರ ಮೊಗದಲ್ಲಿ ಮಂದಹಾಸದ ಕಳೆ ಮೂಡುತ್ತಿದೆ. ದಸರಾ ಅಂಗವಾಗಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿರುವ ಶುಂಠಿಯ ಬೆಲೆಯಿಂದಾಗಿ ಬಹುತೇಕ ರೈತರು ಬೆಳೆದಿರುವ ಪ್ರಮುಖ ವಾಣಿಜ್ಯ ಬೆಳೆ ಶುಂಠಿಯಿAದಾಗಿ ದಸರಾ ಆಚರಣೆ ಸಂಭ್ರಮ ತಂದಿದೆ ಎಂದೇ ಹೇಳಬಹುದು.

ಕಳೆದ ನಾಲ್ಕಾರು ದಿನಗಳ ಹಿಂದೆ ೬೦ ಕೆ.ಜಿ. ತೂಕದ ಒಂದು ಚೀಲ ಶುಂಠಿಗೆ ರೂ.೪೫೦ ರಿಂದ ರೂ.೫೦೦ ಇದ್ದದ್ದು ಇದೀಗ ರೂ. ೬೫೦ ರಿಂದ ರೂ. ೭೦೦ ರೂಪಾಯಿಗೆ ಏರಿಕೆ ಕಂಡಿದೆ.

ಹಳೆಯ ಶುಂಠಿ ದರ ಇದೇ ೬೦ ಕೆ.ಜಿ. ಚೀಲವೊಂದಕ್ಕೆ ೨,೨೦೦ ರೂಗಳಿದೆ. ಕಳೆದ ವರ್ಷ ಇದೇ ಹೊಸ ಶುಂಠಿ ಫಸಲಿಗೆ ರೂ.೧೧೦೦ ಇತ್ತು. ಅಂತೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ೪೦೦ ರಿಂದ ೪೫೦ ರೂ. ಕಡಿಮೆಯೇ. ಆದಾಗ್ಯೂ ಈ ಬಾರಿ ಶುಂಠಿ ಬೆಳೆದ ಅನೇಕ ಕೃಷಿಕರು ಈಗಾಗಲೇ ರೂ.೪೫೦ ರಿಂದ ೫೦೦ ರೂ.ಗಳು ಇದ್ದಾಗ, ಮತ್ತೆ ದರ ಕುಸಿತದ ಭೀತಿಯಿಂದ ಬಂದಷ್ಟು ಬರಲಿ ಎಂದು ಶುಂಠಿ ಫಸಲು ಕಟಾವು ಮಾಡಿದ್ದಾರೆ.

ಆರ್ಥಿಕವಾಗಿ ಸಬಲರಾಗಿರುವ ಕೆಲವರು ಇನ್ನೂ ತಮ್ಮ ಭೂಮಿಯಲ್ಲಿ ಬೆಳೆದ ಶುಂಠಿ ಇಟ್ಟುಕೊಂಡು ಬೆಲೆ ಏರಿಕೆಯನ್ನು ಗಮನಿಸುತ್ತಾ ದಿನಗಳೆಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಈಗ ಚಾಲ್ತಿಯಲ್ಲಿರುವ ದರ ಯಥಾ ಸ್ಥಿತಿ ಕಾಯ್ದುಕೊಳ್ಳಬಹುದು. ಅಥವಾ ಮತ್ತೆ ೫೦ ರಿಂದ ೧೦೦ ರೂ.ಗಳವರೆಗೆ ಏರಿಕೆಯಾಗಬಹುದು. ಆದರೆ ದಸರಾ ಬಳಿಕ ಮತ್ತೆ ಅದೇ ಅರ್ಧ ಸಾವಿರ ರೂ.ಗಳಿಗೆ (೫೦೦ ರೂ.) ಇಳಿಕೆಯಾದರೂ ಅಚ್ಚರಿಪಡಬೇಕಿಲ್ಲ.