ಕೂಡಿಗೆ, ಅ. ೧೨: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲದ ೨ನೇ ಅಂಗನವಾಡಿ ಕೇಂದ್ರದ ವತಿಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಅಂಗನವಾಡಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ನೆರವೇರಿಸಿ ಗ್ರಾಮಸ್ಥರು ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗೀರತಿ ವಹಿಸಿ ಪೋಷಣ್ ಅಭಿಯಾನದ ಮಾಹಿತಿಯನ್ನು ಮಹಿಳೆಯರು ಸಮರ್ಪಕವಾಗಿ ತಿಳಿದುಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸರಿತಾ, ಲತಾಬಾಯಿ, ಗೀತಾ ಕಾಂತಾರಾಜ್, ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅನುಸೂಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಯ್ಯ, ಅಂಗನವಾಡಿ ಕಾರ್ಯಕರ್ತೆ ಎಂ.ಡಿ. ಲತ, ಅಂಗನವಾಡಿ ಸಹಾಯಕಿ ಎಸ್.ಜಿ. ಜ್ಯೋತಿ ಭಾಗವಹಿಸಿದ್ದರು.